ಜಿಲ್ಲೆ

ಪ್ರಕೃತಿ ಸಂರಕ್ಷಣೆಗಾಗಿ ಯೋಜನೆ ಜಾರಿ : ಪ್ರೊ.ವಿನ್ಸೆಂಟ್ ಮ್ಯಾಥ್ಯೂ ಅಭಿಮತ : ಅಮ್ಮನ ಹೆಸರಿನಲ್ಲಿ ವೃಕ್ಷ

ಸೌಮ್ಯ ಆರ್

ಕಾಸರಗೋಡು: ಕೇರಳ ಕೇಂದ್ರೀಯ ವಿವಿ ಕಾಸರಗೋಡು ಪೆರಿಯ ಕ್ಯಾಂಪಸ್‌ನಲ್ಲಿ ‘ಅಮ್ಮನ ಹೆಸರಿನಲ್ಲಿ ವೃಕ್ಷ’ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಪ್ರಭಾರ ಉಪಕುಲಪತಿ ಪ್ರೊ.ವಿನ್ಸೆಂಟ್ ಮ್ಯಾಥ್ಯೂ ಸಸಿ ನೆಡುವ ಮೂಲಕ ಯೋಜನೆ ಉದ್ಘಾಟಿಸಿ, ಕೆಂದ್ರೀಯ ವಿವಿ ಪ್ರಕೃತಿ ಸಂರಕ್ಷಣೆ ಮತ್ತು ಸಾಮಾಜಿಕ ಅರಣ್ಯೀಕರಣಕ್ಕಾಗಿ ಹಲವಾರು ಯೋಜನೆ ಜಾರಿಗೊಳಿಸುತ್ತಿದ್ದು, ಇದರಲ್ಲಿ ‘ಅಮ್ಮನ ಹೆಸರಿನಲ್ಲಿ ವೃಕ್ಷ’ ಒಂದಾಗಿದೆ ಎಂದರು.

ಕ್ಯಾಂಪಸ್ ಡೆವಲಪ್ ಮೆಂಟ್ ಕಮಿಟಿ ನೇತೃತ್ವದಲ್ಲಿ ಕೇರಳ ಅರಣ್ಯ ಇಲಾಖೆ ಕಾಸರಗೋಡು ಸಾಮಾಜಿಕ ಅರಣ್ಯ ವಿಭಾಗದ ಸಹಯೋಗದಲ್ಲಿ ‘ವಿದ್ಯಾವನ’ ಎಂಬ ಹೆಸರಿನಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ರಿಜಿಸ್ಟ್ರಾರ್ ಡಾ.ಎಂ.ಮುರಳೀಧರ ನಂಬಿಯಾರ್ ಅಧ್ಯಕ್ಷತೆ ವಹಿಸಿದ್ದರು. ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಆರ್.ಜಯಪ್ರಕಾಶ್, ಪುಲ್ಲೂರ್ ಪೆರಿಯ ಗ್ರಾಪಂ ಅಧ್ಯಕ್ಷ ಸಿ.ಕೆ. ಅರವಿಂದಾಕ್ಷನ್, ಸಾಮಾಜಿಕ ಅರಣ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಜ್ನಾ ಕರೀಂ, ಕ್ಯಾಂಪಸ್ ಅಭಿವೃದ್ಧಿ ಅಧಿಕಾರಿ ಡಾ.ಟೋನಿ ಗ್ರೇಸ್, ರೇಂಜ್ ಫಾರೆಸ್ಟ್ ಅಧಿಕಾರಿಗಳಾದ ಸೊಲೊಮನ್ ಟಿ.ಜಾರ್ಜ್, ಕೆ.ಗಿರೀಶ್ ಉಪಸ್ಥಿತರಿದ್ದರು.

ಕ್ಯಾಂಪಸ್‌ನಲ್ಲಿರುವ ಶಿಕ್ಷಕರ ವಸತಿ ಗೃಹದ ಬಳಿ ಎರಡು ಎಕರೆ ಜಾಗದಲ್ಲಿ ಯೋಜನೆ ಹಮ್ಮಿಕೊಳ್ಳಲಾಗಿದೆ. ಔಷಧೀಯ ಸಸ್ಯಗಳು, ಹಣ್ಣಿನ ಮರಗಳು ಸೇರಿದಂತೆ 1200 ಸಸಿಗಳನ್ನು ನೆಡಲಾಗಿದೆ.