ಕಾರವಾರ: ಕೇಣಿಯಲ್ಲಿ ಜೆಎಸ್‌ಡಬ್ಲು ಕಂಪನಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಪರಿಸರ ಅನುಮತಿ ಪಡೆಯುವ ಸಲುವಾಗಿ ಆ.22 ರಂದು ಸಾರ್ವಜನಿಕ ಅಹವಾಲು ಸಭೆಯನ್ನು ಅಂಕೋಲಾದ ಸತ್ಯಾಗ್ರಹ ಸ್ಮಾರಕ ಸಭಾಭವನದಲ್ಲಿ ಆಯೋಜಿಸಲಾಗಿದೆ. ಈಗಾಗಲೇ ಸ್ಥಳೀಯ ಮೀನುಗಾರರು, ರೈತರು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದು, ಶುಕ್ರವಾರವೂ ತಮ್ಮ ಅಭಿಪ್ರಾಯ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ವಿವಿಧ ಪರಿಸರಾಸಕ್ತರು ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೆಲವು ಸಂಘಟನೆಗಳು ಯೋಜನೆಯ ಪರವಾಗಿಯೂ ಮಾತನಾಡುವ ಸಾಧ್ಯತೆ ಇದೆ.
ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸಭೆ ಆಯೋಜನೆಯಾಗಿದೆ. ಬೆಳಗ್ಗೆ 9.30 ರಿಂದ ಯೋಜನೆಯ ಕುರಿತು ಕಂಪನಿಯ ಅಧಿಕಾರಿಗಳು ಪಿಪಿಟಿ ಮೂಲಕ ವಿವರಣೆ ನೀಡುವರು. ನಂತರ ಯೋಜನೆಯ ಬಗ್ಗೆ ಗೊಂದಲವಿದ್ದರೆ ಪ್ರಶ್ನೆ ಕೇಳಲು ಅವಕಾಶ ಕಲ್ಪಿಸಲಾಗುವುದು ಆ ನಂತರ ಆಕ್ಷೇಪಣೆಗಳನ್ನು ಲಿಖಿತವಾಗಿ ಹಾಗೂ ಮೌಖಿಕವಾಗಿ ಸಲ್ಲಿಸಲು ಅವಕಾಶ ದೊರೆಯಲಿದೆ ಎಂದರು.
ಭವನದ ಒಳಗೆ 800 ಜನ ಕೂರಲು ಅವಕಾಶವಿದೆ. ಹೊರಗೂ ತಗಡು ಹಾಕಿ ಕೂರಲು ವ್ಯವಸ್ಥೆ ಮಾಡಿದ್ದು, ಒಟ್ಟು 2500 ಜನರಿಗೆ ವ್ಯವಸ್ಥೆ ಮಾಡಲಾಗಿದೆ. ಸಾಕಷ್ಟು ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಇಡೀ ಸಭೆಯ ವಿಡಿಯೋ ಚಿತ್ರೀಕರಣ ನಡೆಯಲಿದೆ. ನಂತರ ಸಾರಾಂಶವನ್ನು ಕ್ರೋಢೀಕರಿಸಿ ಕೇಂದ್ರ ಪರಿಸರ ಮಂತ್ರಾಲಯಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.
ಜೆಎಸ್‌ಡಬ್ಲು ಹೇಳುವ ಯೋಜನೆಯ ವಿವರ
*ಒಟ್ಟು 4011 ಕೋಟಿ ರೂ. ಯೋಜನೆ
*3950 ಮೀಟರ್ ಉದ್ದದ 14 ಬರ್ತ್ಗಳ ನಿರ್ಮಾಣ
*ಬರ್ತ್ನಿಂದ ಸಮುದ್ರ ಕಡೆಗೆ 220 ಮೀಟರ್ ಅಗಲದ 11.2 ಕಿಮೀ ಉದ್ದದರೆಗೆ ಚಾನಲ್ ನಿರ್ಮಾಣ
*ಕಲ್ಲಿದ್ದಲು, ಕಬ್ಬಿಣದ ಅದಿರು, ಸಿಮೆಂಟ್ ಸೇರಿ ಹಲವು ಉತ್ಪನ್ನಗಳ ವಹಿವಾಟು
*ಕೇಣಿಯಲ್ಲಿ ಸಮುದ್ರ ತುಂಬಿ 457 ಎಕರೆ ಬರ್ತ್ ನಿರ್ಮಾಣ
*ಬಂದರಿಗೆ ರಸ್ತೆ, ರೈಲು ಸಂಪರ್ಕ. ಅದಕ್ಕಾಗಿ 116 ಎಕರೆ ಜಮೀನು ಭೂ ಸ್ವಾಽÃನ
*ಕಾರ್ಗೋ ಸಂಗ್ರಹಕ್ಕಾಗಿ ಬೇರೆಡೆ 309 ಎಕರೆ ಜಮೀನು ಖರೀದಿ
*4.5 ಕಿಮೀ ದಕ್ಷಿಣ ಬ್ರೇಕ್ ವಾಟರ್ ನಂತರ ನಿರ್ಮಾಣ
*ನಿರ್ಮಾಣ ಹಂತದಲ್ಲಿ 2 ಸಾವಿರ ಜನರಿಗೆ, ಕಾರ್ಯಾಚರಣೆ ಹಂತದಲ್ಲಿ 500 ಜನರಿಗೆ ಉದ್ಯೋಗ
ಯೋಜನೆಯ ಕುರಿತು ಎಂಒಇಎಫ್‌ಸಿಸಿಯಿಂದ ನೀಡಿದ ಟಿಒಆರ್‌ನ್ನು ಈಗಾಗಲೇ ಎಲ್ಲೆಡೆ ಲಭ್ಯವಿರುವಂತೆ ಮಾಡಲಾಗಿದೆ. ಯಾವುದೇ ಪಕ್ಷಪಾತವಿಲ್ಲದೇ ಎಲ್ಲರಿಗೂ ತಮ್ಮ ಅಭಿಪ್ರಾಯ ಹೇಳಿಕೊಳ್ಳಲು ಅವಕಾಶ ಮಾಡಿಕೊಡಲಾಗುವುದು. ಸಾರ್ವಜನಿಕರು, ಸಂಘ ಸಂಸ್ಥೆಗಳ ಪ್ರಮುಖರು ಆಗಮಿಸಿ ತಮ್ಮ ಅಭಿಪ್ರಾಯ ತಿಳಿಸಬೇಕು.
ಕೆ.ಲಕ್ಷ್ಮೀಪ್ರಿಯಾ
ಜಿಲ್ಲಾಧಿಕಾರಿ, ಉತ್ತರ ಕನ್ನಡ
ಕೇರಳ, ಗುಜರಾತ್, ಮಹಾರಾಷ್ಟ್ರ ಹೀಗೆ ಕರಾವಳಿ ಹೊಂದಿರುವ ಎಲ್ಲ ರಾಜ್ಯಗಳಲ್ಲಿ ಎರಡು, ಮೂರು ಬಂದರುಗಳಿವೆ. ಕರ್ನಾಟಕದಲ್ಲಿ ಮಾತ್ರ ರಾಜ್ಯ ಸರ್ಕಾರದ ಅಡಿ ಯಾವುದೇ ಬೃಹತ್ ಬಂದರು ಇಲ್ಲ. ರಾಜ್ಯ ಸರ್ಕಾರ ಯಾವುದೇ ಹಣ ಹೂಡದೇ ಸರ್ಕಾರಕ್ಕೆ ಮೂರು ವರ್ಷಗಳ ನಂತರ ನಿರಂತರ ಆದಾಯ ಬರುವ ಯೋಜನೆ ಇದಾಗಿದೆ. ಜೆಎಸ್‌ಡಬ್ಲು ದೇಶದ ಪ್ರತಿಷ್ಠಿತ ಕಂಪನಿಯಾಗಿದೆ. ಮೀನುಗಾರರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು. ಯೋಜನೆ ಜಾರಿಗೆ ಸಹಕಾರ ನೀಡಬೇಕು.
ಮಂಕಾಳ ವೈದ್ಯ
ಜಿಲ್ಲಾ ಉಸ್ತುವಾರಿ ಸಚಿವ