ನೆಲಮಂಗಲ: ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಕೆಂಗಲ್ ಹನುಮಂತಯ್ಯ ಅವರು ಅಪಾರ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಡಾ. ಕೆ. ಶ್ರೀನಿವಾಸ್‌ಮೂರ್ತಿ ಹೇಳಿದರು.
ನಗರದ ತಾಲೂಕು ಕಚೇರಿ ಮುಂಭಾಗ ಕೆಂಗಲ್ ಹನುಮಂತಯ್ಯ ಅವರ ಕಂಚಿನ ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ನಗರದ ಮುಖ್ಯರಸ್ತೆ ವಿಸ್ತರಣೆ ವೇಳೆ ತಾಲೂಕು ಕಚೇರಿ ಮುಂಭಾಗದಲ್ಲಿದ್ದ ಕೆಂಗಲ್ ಹನುಮಂತಯ್ಯ ಅವರ ಪುತ್ಥಳಿ ತೆರವುಗೊಳಿಸಲಾಗಿತ್ತು. ತಾಲೂಕಿನ ಯುವಕರ ತಂಡ ಪ್ರತಿಮೆ ನಿರ್ಮಾಣ ಸಮಿತಿ ರಚಿಸಿಕೊಂಡು ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರ ಕಂಚಿನ ಪ್ರತಿಮೆ ನಿರ್ಮಿಸಲು ಮುಂದಾಗಿರುವುದು ಸಂತಸದ ಸಂಗತಿ. ಬೆಂಗಳೂರು ವಿಧಾನಸೌಧದ ಮುಂಭಾಗದಲ್ಲಿರುವಂತೆ ತಾಲೂಕು ಕಚೇರಿ ಮುಂಭಾಗದಲ್ಲಿ ಅವರ ಮೂರ್ತಿ ನಿರ್ಮಿಸಬೇಕು ಎಂದರು.
ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಅವಧಿಯಲ್ಲಿ ತಾಲೂಕಿನಲ್ಲಿ ಒಕ್ಕಲಿಗರ ಭವನ ನಿರ್ಮಾಣಕ್ಕಾಗಿ 10 ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು. ಜಾಗದ ಸಮಸ್ಯೆಯಿಂದಾಗಿ ಅದರ ನಿರ್ಮಾಣ ಕಾರ್ಯಕ್ಕೆ ಅಡ್ಡಿಯಾಗಿತ್ತು. ಮುಂದಿನ ದಿನಗಳಲ್ಲಿ ಭವನ ನಿರ್ಮಾಣ ಕಾರ್ಯ ಕುರಿತಾಗಿ ಅಗತ್ಯ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ವಿಧಾನಪರಿಷತ್ ಮಾಜಿ ಸದಸ್ಯ ಇ. ಕೃಷ್ಣಪ್ಪ ಮಾತನಾಡಿ, 6 ಅಡಿ ಎತ್ತರದ ಕೆಂಗಲ್ ಹನುಮಂತಯ್ಯ ಅವರ ಕಂಚಿನ ಪತ್ರಿಮೆ ನಿರ್ಮಿಸುತ್ತಿರುವುದು ಸಂತಸದ ಸಂಗತಿ. ಸಮುದಾಯದ ಮುಖಂಡರು, ಜನಪ್ರತಿನಿಧಿಗಳು ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿರುವ ಯುವಕರಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ವಿಧಾನಪರಿಷತ್ ಸದಸ್ಯ ಬಿ.ಎಂ.ಎಲ್. ಕಾಂತರಾಜು, ಜಿಲ್ಲಾ ಪಂಚಾಯಿತಿ ಸದಸ್ಯ ಟಿ. ತಿಮ್ಮರಾಯಪ್ಪ, ತಾಪಂ ಸದಸ್ಯ ಬಿ.ಕೆ. ಮುನಿರಾಜು, ವೆಂಕಟೇಗೌಡ, ನಗರಸಭೆ ಸದಸ್ಯರಾದ ಎನ್. ಗಣೇಶ್, ಆಂಜಿನಮೂರ್ತಿ, ಕೆ.ಎಂ. ಶಿವಕುಮಾರ್, ಸುನೀಲ್ ಮೂಡ್, ಜೆಡಿಎಸ್ ತಾಲೂಕು ಅಧ್ಯಕ್ಷ ಎನ್.ಪಿ. ಹೇಮಂತ್‌ಕುಮಾರ್, ರಾಜ್ಯ ಒಕ್ಕಲಿಗರ ವೇದಿಕೆ ಅಧ್ಯಕ್ಷ ಎಂ. ನಾರಾಯಣ್, ಒಕ್ಕಲಿಗ ಯುವ ವೇದಿಕೆ ಅಧ್ಯಕ್ಷ ಬಾಬು, ಟಿಎಪಿಸಿಎಂಎಸ್ ನಿರ್ದೇಶಕ ಜಿ. ಸಂಪತ್, ಗ್ರಾಪಂ ಮಾಜಿ ಅಧ್ಯಕ್ಷ ಎಂ.ಕೆ. ನಾಗರಾಜು, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕೊಡಿಗೇಹಳ್ಳಿ, ವಕೀಲ ಎನ್.ಪಿ. ರಘುನಾಥ್, ಮುಖಂಡರಾದ ನಾರಾಯಣ್‌ಗೌಡ, ಬಿ.ಟಿ. ಮೋಹನ್‌ಕುಮಾರ್, ಎಲ್. ಸುರೇಂದ್ರ, ಶೇಖರ್, ಟಿ.ಎನ್. ಗೋಪಿ, ಸುಬ್ರಮಣಿ, ಎಚ್. ಶಂಕರ್, ಪ್ರಮೋದ್‌ಕುಮಾರ್, ತಿಮ್ಮೇಗೌಡ, ವಿ. ಗಿರೀಶ್, ಬಾವಿಕೆರೆ ರಮೇಶ್, ವಿಷ್ಣು, ಪ್ರತಿಮೆ ನಿರ್ಮಾಣ ಸಮಿತಿ ಸದಸ್ಯ ಬೂದಿಹಾಳ್ ಕಿಟ್ಟಿ ಮತ್ತಿತರರು ಇದ್ದರು.