ತುಮಕೂರಿನಲ್ಲಿ ನಾಡಪ್ರಭು ಶ್ರೀಕೆಂಪೇಗೌಡರ ಜಯಂತಿ ಅಂಗವಾಗಿ ಆಯೋಜಿಸಿದ್ದ ಭಾವಚಿತ್ರ ಮೆರವಣಿಗೆಗೆ ಜಿ.ಬಿ.ಜ್ಯೋತಿಗಣೇಶ್​ ಚಾಲನೆ ನೀಡಿದರು. ತಿಪ್ಫೇಸ್ವಾಮಿ, ಆರ್​.ಕಾಮರಾಜು, ಚಿಕ್ಕರಂಗೇಗೌಡ, ಗಿರೀಶ್​ ಮತ್ತಿತರರು ಇದ್ದರು. 
ಜಿಲ್ಲೆ

ದೂರದೃಷ್ಟಿಯ ಮಹಾನ್​ ನಾಯಕ ಕೆಂಪೇಗೌಡ

ಜಿಲ್ಲಾ ಪಂಚಾಯಿತಿ ಸಿಇಒ ಜಿ.ಪ್ರಭು ಬಣ್ಣನೆ-ಜಿಲ್ಲಾಡಳಿತದಿಂದ ನಾಡಪ್ರಭು ಜಯಂತಿ - ಭಾವಚಿತ್ರ ಮೆರವಣಿಗೆ

ತುಮಕೂರು: ನಾಡಪ್ರಭು ಕೆಂಪೇಗೌಡರು ಆಳ್ವಿಕೆ ನಡೆಸಿದ 46 ವರ್ಷಗಳಲ್ಲಿ ಬೆಂಗಳೂರು ನಗರವನ್ನು ವ್ಯವಸ್ಥಿತವಾಗಿ ರೂಪಿಸಿದ ಪರಿಣಾಮವಾಗಿ, ದೂರದೃಷ್ಟಿಯ ಲವಾಗಿ ಇಂದು ಬೃಹತ್​ ಬೆಂಗಳೂರು ನಗರವಾಗಿ ಗುರುತಿಸಿಕೊಂಡಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು ಅಭಿಪ್ರಾಯಪಟ್ಟರು.

ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ ವತಿಯಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣಾ ಸಮಿತಿ ಆಯೋಜಿಸಿದ್ದ ಕೆಂಪೇಗೌಡರ 516ನೇ ಜನ್ಮ ಜಯಂತಿಯಲ್ಲಿ ಮಾತನಾಡಿದ ಅವರು, ಇಡೀ ವಿಶ್ವವೇ ತಿರುಗಿ ನೋಡುವಂತೆ ಇಂದು ಬೆಂಗಳೂರು ನಿರ್ಮಾಣವಾಗಿದ್ದರೆ ಅದಕ್ಕೆ ನಾಡಪ್ರಭುಗಳೇ ಕಾರಣ ಎಂದರು.

ಒಂದು ಪಟ್ಟಣದ ಅರ್ಥಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ, ವ್ಯಾಪಾರ, ವ್ಯವಹಾರಗಳ ವೃದ್ಧಿಗೆ ಸಾಕಷ್ಟು ಕೊಡುಗೆ ಕೆಂಪೇಗೌಡರು ನೀಡಿದ್ದಾರೆ. ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಪ್ರತ್ಯೇಕ ಪೇಟೆ ನಿರ್ಮಿಸಿಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಯ ಬೀಜ ನೆಟ್ಟವರು ಕೆಂಪೇಗೌಡರು. ಇಂದು ಅವರ ನೆಟ್ಟ ಬೀಜ ಹೆಮ್ಮರವಾಗಿ ಬೆಳೆದು ವಿಶ್ವದ

ಭೂಪಟದಲ್ಲಿ ಗುರುತಿಸಿಕೊಂಡಿದೆ ಎಂದರು.

ನಾಡಪ್ರಭು ಕೆಂಪೇಗೌಡರು ಒಳ್ಳೆಯ ಆಡಳಿತಗಾರರಷ್ಟೇ ಅಲ್ಲ, ಸಮಾಜ ಸುಧಾರಕರು ಹೌದು. ಅಂದಿನ ಕಾಲದಲ್ಲಿದ್ದ ಮೂಢನಂಬಿಕೆಗಳ ವಿರುದ್ಧ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರು. ಇಂದು ಬೆಂಗಳೂರು ನಗರ ಇಡೀ ಭಾರತದ ಐಟಿ, ಬಿಟಿ ಕ್ಷೇತ್ರಕ್ಕೆ ಶೇ.60&-70 ಆದಾಯ ತಂದುಕೊಡುತ್ತಿದೆ. ರಾಷ್ಟ್ರದ ಎರಡನೇ ಅತಿ ದೊಡ್ಡ ಆದಾಯ ತಂದುಕೊಡುವ ರಾಜ್ಯವಾಗಿರುವ ಕರ್ನಾಟಕದ ಬೆಳವಣಿಗೆಯಲ್ಲಿ ಬೆಂಗಳೂರಿನ ಪಾತ್ರ ಮಹತ್ವದ್ದಾಗಿದೆ. ಇಸ್ರೋ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿ ಹಲವು ಮಹತ್ವದ ಮೈಲಿಗಲ್ಲನ್ನು ಬೆಂಗಳೂರು ಹೊಂದಿದೆ. ಇದರ ಹಿಂದಿನ ಶಕ್ತಿ ಕೆಂಪೇಗೌಡರು ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ಮಾತನಾಡಿ, ಕರ್ನಾಟಕ ಆಡಳಿತ, ಅರ್ಥಿಕತೆ, ಆರೋಗ್ಯ, ವಾಸ್ತುಶಿಲ್ಪ, ಶಿಕ್ಷಣ ಕ್ಷೇತ್ರಕ್ಕೆ ಕೆಂಪೇಗೌಡರ ಕೊಡುಗೆ ಅಮೂಲ್ಯ. ತುಮಕೂರು ನಗರದ ಬಿಜಿಎಸ್​ ವೃತ್ತದಲ್ಲಿದ್ದ ನಾಮಫಲಕ ತೆಗೆಯಲಾಗಿದೆ. ಹೊಸದಾಗಿ ನಾಮಫಲಕ ಹಾಕುವ ಜತೆಗೆ, ಪ್ರತಿಮೆ ನಿಮಾರ್ಣಕ್ಕೆ ಜಿಲ್ಲಾಡಳಿತ ಮುಂದಾಗಬೇಕು. ಕೆಂಪೇಗೌಡರ ಕುರಿತು ಮುಂದಿನ ಪೀಳಿಗೆಗೆ ಮಾಹಿತಿ ನೀಡಲು ತುಮಕೂರು ವಿವಿಯಲ್ಲಿ ಕೆಂಪೇಗೌಡರ ಹೆಸರಿನ ಅಧ್ಯಯನ ಪೀಠ ತೆರೆಯಬೇಕು. ನಾಡಪ್ರಭು ಕೆಂಪೇಗೌಡರು ಹಾಗೂ ಶ್ರೀಬಾಲಗಂಗಾಧರನಾಥ ಸ್ವಾಮೀಜಿಗಳ

ಕುರಿತ ಸಂಕ್ಷಿಪ್ತ ಮಾಹಿತಿ ಒಳಗೊಂಡ ಕೈಪಿಡಿಯನ್ನು ಎಲ್ಲ ಶಾಲಾ, ಕಾಲೇಜುಗಳ ಮಕ್ಕಳಿಗೂ

ದೊರೆಯುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕ ಎಚ್​.ನಿಂಗಪ್ಪ ಮಾತನಾಡಿ, ಕೆಂಪೇಗೌಡರು ಜನಸಮುದಾಯದ ಒಳಿತಿಗಾಗಿ ನೂರಾರು ಕೆರೆ, ಕಟ್ಟೆಗಳನ್ನು ಕಟ್ಟಿದವರು, ಐದುನೂರು ವರ್ಷಗಳ ಹಿಂದೆ ಪ್ರತಿಯೊಂದು ಜಾತಿ,

ಸಮುದಾಯಕ್ಕೂ ಸಮಾನ ಅವಕಾಶ ನೀಡಿ ಜಾತ್ಯತಿತರಾಗಿದ್ದರು. ಆದರೆ, ಇಂದು ಚುನಾವಣೆಗಳಲ್ಲಿ ಜಾತಿ ತಾಂಡವವಾಡುತ್ತಿದೆ. ಕೆಂಪೇಗೌಡರ ಬಗ್ಗೆ ಸಮುದಾಯದ ಯುವಕರಲ್ಲಿ ರ್ನಿಲಕ್ಷ$್ಯ ಕಾಣುತ್ತಿದೆ. ಸರ್ಕಾರ ಸಹ ಎಲ್ಲ ವರ್ಗದ ಮಹನೀಯರ ಜಯಂತಿಯನ್ನು ಎಲ್ಲ ಸಮುದಾಯದ ಜನರು ಸೇರಿ ಆಚರಿಸುವಂತಹ ವಾತಾವರಣ ಸೃಷ್ಟಿಸಬೇಕು ಎಂದರು.

ರಾಜ್ಯ ಒಕ್ಕಲಿಗರ ಸಂಘದ ಸಹ ಕಾರ್ಯದರ್ಶಿ ಹನುಮಂತರಾಯಪ್ಪ ಮಾತನಾಡಿ, ಸರ್ಕಾರಿ ಕಾರ್ಯಕ್ರಮವಾದರೂ ಜಿಲ್ಲಾಧಿಕಾರಿ ಗೈರಾಗಿರುವುದು ಬೇಸರ ಮೂಡಿಸಿದೆ. ಪೂರ್ವಭಾವಿ ಸಭೆಗೂ ಜಿಲ್ಲಾಧಿಕಾರಿ ಗೈರಾಗಿದ್ದರು. ಜಾತಿ, ಮತ, ಪಂಥದ ಭೇದವಿಲ್ಲದೆ ಬೆಂಗಳೂರು ನಗರ ಕಟ್ಟಿದ ಕೆಂಪೇಗೌಡರ ಬಗ್ಗೆ ರ್ನಿಲಕ್ಷ ಸಲ್ಲದು ಎಂದರು. ಕಾರ್ಯಕ್ರಮದ ಪೂರ್ವದಲ್ಲಿ ನಗರದ ಬಿಜಿಎಸ್​ ವೃತ್ತದಿಂದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದವರೆಗೂ ಜಾನಪದ ಕಲಾತಂಡಗಳ ಪ್ರದರ್ಶನದೊಂದಿಗೆ ಕೆಂಪೇಗೌಡರ ಭಾವಚಿತ್ರದ ಮೆರವಣಿಗೆ ನಡೆಯಿತು. ಮೆರವಣಿಗೆಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್​, ಎಡಿಸಿ ಡಾ.ಎನ್​.ತಿಪ್ಪೇಸ್ವಾಮಿ ಚಾಲನೆ ನೀಡಿದರು. ವೇದಿಕೆಯಲ್ಲಿ ತುಮಕೂರು ಉಪವಿಭಾಗಾಧಿಕಾರಿ ನಾಹಿದಾ ಜಮ್​ಜಮ್​, ಭೈರವೇಶ್ವರ ಬ್ಯಾಂಕ್​ನ ಚಿಕ್ಕರಂಗಣ್ಣ, ಕೆಂಪೇಗೌಡ ಬ್ಯಾಂಕ್​ನ ಲಿಂಗಪ್ಪ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನರಸಿಂಹರಾಜು, ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್​.ಸಿದ್ದಲಿಂಗಪ್ಪ, ಮಾಜಿ ಉಪಮೇಯರ್​ ಟಿ.ಆರ್​.ನಾಗರಾಜು, ದೊಡ್ಡಲಿಂಗಪ್ಪ, ಕಾಮರಾಜು ಇದ್ದರು.