ಜಿಲ್ಲೆ

ಕೆಂಪೇಗೌಡ ಲೇಔಟ್ ಸೈಟ್‌ದಾರರಿಗೆ ಕತ್ತಲೇ ಭಾಗ್ಯ !

ಆರ್.ತುಳಸಿಕುಮಾರ್

ಆರ್​​.ತುಳಸಿಕುಮಾರ್​ ಬೆಂಗಳೂರು

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ರಚಿತ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಪೂರ್ಣ ಪ್ರಮಾಣದ ಮೂಲಸೌಕರ್ಯ ಇಲ್ಲದ ಕಾರಣ ಸೈಟ್‌ದಾರರು ಮನೆಗಳನ್ನು ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮುಖ್ಯವಾಗಿ ವಿದ್ಯುತ್ ಸೌಲಭ್ಯ ಸಿಗದ ಕಾರಣ ಹೆಚ್ಚಿನ ಸಂಖ್ಯೆಯ ನಿವೇಶನ ಹಂಚಿಕೆದಾರರು ಸ್ವಂತ ಮನೆ ಹೊಂದುವ ಆಸೆಗೆ ಕಲ್ಲು ಬಿದ್ದಂತಾಗಿದೆ.

ಕೆಂಪೇಗೌಡ ಬಡಾವಣೆಯಲ್ಲಿ ಮೂಲಸೌಕರ್ಯ ಕಲ್ಪಿಸುವ ಕೆಲಸಕ್ಕೆ 5 ವರ್ಷದ ಹಿಂದೆಯೇ ಚಾಲನೆ ನೀಡಲಾಗಿದೆ. ಆದರೂ, ಈವರೆಗೆ ಒಂದು ಸೌಕರ್ಯವೂ ಪೂರ್ಣಗೊಂಡಿಲ್ಲ. ಅದರಲ್ಲೂ ವಿದ್ಯುತ್ ಸೌಲಭ್ಯ ಇಲ್ಲದ ಕಾರಣ ಮನೆ ನಿರ್ಮಾಣ ಚಟುವಟಿಕೆ ನೆಲಕಚ್ಚಿದೆ. ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯಲು ಹರಸಾಹಸ ಮಾಡಬೇಕಿರುವುದರಿಂದ ಸ್ವಂತ ಸೂರು ಹೊಂದುವ ಆಸೆಯಿದ್ದರೂ, ಮನೆ ನಿರ್ಮಿಸಲಾಗದೆ ಸಮಸ್ಯೆಗೆ ಒಳಗಾಗಿದ್ದಾರೆ. ಬಿಡಿಎ ಅಧಿಕಾರಿಗಳನ್ನು ವಿಚಾರಿಸಿದರೆ ಸ್ವಲ್ಪ ದಿನ ಕಾಯಿರಿ . . . ಎಂಬ ಉತ್ತರ ನೀಡಿ ಸಾಗಹಾಕಲಾಗುತ್ತಿದೆ ಎಂಬ ವ್ಯಥೆಯಲ್ಲೇ ಜನತೆ ವಿದ್ಯುತ್ ಸಂಪರ್ಕಕ್ಕಾಗಿ ಚಾತಕಪಕ್ಷಿಯಂತೆ ಕಾಯುವಂತಾಗಿದೆ.

500 ಕೋಟಿ ರೂ. ವೆಚ್ಚ:

ಈ ಲೇಔಟ್‌ನ 9 ಬ್ಲಾಕ್‌ಗಳಲ್ಲಿ ಹಂಚಿಕೆಯಾಗಿರುವ 30 ಸಾವಿರ ಸೈಟ್‌ದಾರರಿಗೆ ವಿದ್ಯುತ್ ಪೂರೈಸಲು ಪ್ರಾಧಿಕಾರವು 500 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಿದೆ. ಒಟ್ಟು 240 ಮೆ.ವ್ಯಾ. ವಿದ್ಯುತ್ ಪೂರೈಕೆಗಾಗಿ ಬಡಾವಣೆಯ ಐದು ಕಡೆಗಳಲ್ಲಿ 66/11 ಕೆವಿ ಸಾಮರ್ಥ್ಯದ ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸಬೇಕಿದೆ. ಈ ಪೈಕಿ 3 ವರ್ಷದ ಹಿಂದೆ ಕೊಮ್ಮಘಟ್ಟದಲ್ಲಿ ಮೊದಲ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಟೆಂಡರ್ ಆಹ್ವಾನಿಸಿ ಎಸ್‌ಎಂ ಇಂಜಿನಿಯರ್ಸ್‌ ಪ್ರೈ. ಲಿ. ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಕಾಮಗಾರಿ ಪೂರ್ಣಗೊಳಿಸಲು 13 ತಿಂಗಳ ಗಡುವು ನೀಡಿದ್ದು, ಸದ್ಯ ಶೇ.90 ಕೆಲಸ ಮಾತ್ರ ಮುಗಿದಿದೆ. ಬಾಕಿ ಕೆಲಸ ಪೂರ್ಣಗೊಳಿಸಲು ಗುತ್ತಿಗೆದಾರರು ತಿಣುಕಾಡುತ್ತಿರುವುದು ಸಬ್ ಸ್ಟೇಷನ್ ಆರಂಭಗೊಳ್ಳದೆ ವಿದ್ಯುತ್ ಸಂಪರ್ಕ ಕೈಗೆಟಕುತ್ತಿಲ್ಲ. ಇತ್ತೀಚಿಗಷ್ಟೇ ಭೀಮನಕುಪ್ಪೆಯಲ್ಲಿ 2ನೇ ವಿದ್ಯುತ್ ಉಪಕೇಂದ್ರಕ್ಕೆ ಟೆಂಡರ್ ಆಹ್ವಾನಿಸಿದ್ದು, ಉಳಿದ ಮೂರು ಕೇಂದ್ರಗಳ ಸ್ಥಾಪನೆ ಪ್ರಾರಂಭವಾಗಿಲ್ಲ.

ಕಳ್ಳತನ ಪ್ರಕರಣಗಳಿಗಿಲ್ಲ ತಡೆ:

ಬಡಾವಣೆಯ 9 ಬ್ಲಾಕ್‌ಗಳಲ್ಲಿ ಗ್ರಾಮಗಳಿಗೆ ಹೊಂದಿಕೊಂಡಿರುವ ಕೆಲ ಪ್ರದೇಶಗಳಲ್ಲಿ ಬೀದಿ ದೀಪ ಅಳವಡಿಸುವ ಕಾರ್ಯ ವರ್ಷದ ಹಿಂದೆಯೇ ಕೈಗೊಳ್ಳಲಾಗಿತ್ತು. ಜತೆಗೆ ಕೇಬಲ್ ಫೀಡರ್, ಪರಿವರ್ತಕಗಳ ಅಳವಡಿಕೆಗೆ ಬಳಸುವ ಕಂಬ, ಬಾಕ್ಸ್‌ಗಳನ್ನು ಕಳ್ಳರು ಕದ್ದು ಹೊತ್ತೊಯ್ದಿದ್ದಾರೆ. ಗುತ್ತಿಗೆ ಕಂಪನಿಯ ಗೋದಾಮಿನಿಂದಲೂ ಹಲವು ವಿದ್ಯುತ್ ಉಪಕರಣಗಳು ಕಳ್ಳರ ಪಾಲಾಗಿವೆ. ಇಂತಹ 25ಕ್ಕೂ ಹೆಚ್ಚು ಪ್ರಕರಣಗಳು ನಡೆದಿದ್ದು, ಸ್ಥಳೀಯ ಪೊಲೀಸ್ ಠಾಣೆಗೆ ಬಿಡಿಎ ದೂರು ಸಲ್ಲಿಸಿದೆ. ಇದಾದ ಬಳಿಕ ಬಿಡಿಎ ಹಾಗೂ ಗುತ್ತಿಗೆ ಕಂಪನಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸವನ್ನು ನಿಧಾನಗೊಳಿಸಿದೆ. ಸೈಟ್‌ದಾರರು ಎಲ್ಲೆಲ್ಲಿ ಮನೆಗಳನ್ನು ನಿರ್ಮಿಸುವರೋ ಅಂತಹ ಪ್ರದೇಶದಲ್ಲಿ ಮಾತ್ರ ತಾತ್ಕಾಲಿಕವಾಗಿ ಕಂಬದ ಮೇಲೆ ಲೇನ್ ಎಳೆದು ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ. ಆದರೆ, ಬಹುದೂರದಿಂದ ಸಂಪರ್ಕ ಕಲ್ಪಿಸಬೇಕಿದ್ದರೆ ಆ ವೆಚ್ಚವನ್ನು ಸೈಟ್‌ದಾರರೇ ಭರಿಸಬೇಕಿರುವುದು ಜನರಿಗೆ ಹೊರೆಯಾಗಿದೆ.

ಮುಗಿದ ಗಡುವು, ಮುಗಿಯದ ಕಾಮಗಾರಿ:

ಕೆಂಪೇಗೌಡ ಬಡಾವಣೆಗೆ ವಿವಿಧ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿಯ ಗಡುವು 2023ರಲ್ಲೇ ಮುಗಿದೆ. 3-4 ಬಾರಿ ಗಡುವು ವಿಸ್ತರಿಸಿದರೂ ರಸ್ತೆ, ಕುಡಿಯುವ ನೀರು, ಒಳಚರಂಡಿ, ವಿದ್ಯುತ್ ಸಹಿತ ಇನ್ನಿತರ ಸೌಲಭ್ಯವನ್ನು ಪೂರ್ಣಗೊಳಿಸಲು ಬಿಡಿಎಗೆ ಸಾಧ್ಯವಾಗಿಲ್ಲ. ಅನುದಾನದ ಕೊರತೆ ಮುಂದಿಟ್ಟು ಬಡಾವಣೆ ನಿರ್ಮಾಣವನ್ನು ಅರ್ಧದಲ್ಲೇ ನಿಲ್ಲಿಸಲಾಗಿದೆ ಎಂಬ ಆಕ್ಷೇಪ ಸೈಟ್‌ದಾರರಿಂದ ವ್ಯಕ್ತವಾಗಿದೆ. ರೇರಾ ಹಾಗೂ ವಿಧಾನಸಭೆಯ ಅರ್ಜಿ ಸಮಿತಿ ಸಭೆಯಲ್ಲಿ ನೀಡಿರುವ ವಾಗ್ದಾನದಂತೆ ಕೆಲಸ ಮಾಡಲಾಗದೆ ಪ್ರಾಧಿಕಾರವು ಅಸಹಾಯಕತೆ ವ್ಯಕ್ತಪಡಿಸಿದೆ. ಇದರಿಂದಾಗಿ ಮೂಲಸೌಕರ್ಯ ಒದಗಿಸುವುದು ಇನ್ನೂ 2 ವರ್ಷ ವಿಳಂಬವಾಗುವ ಸಾಧ್ಯತೆ ಇದೆ.

ಸಮನ್ವಯ ಕೊರತೆ:

ವಿದ್ಯುತ್ ಸೌಲಭ್ಯ ಕಲ್ಪಿಸುವ ವಿಚಾರದಲ್ಲಿ ಬಿಡಿಎ, ಕೆಪಿಟಿಸಿಎಲ್ ಹಾಗೂ ಬೆಸ್ಕಾಂ ಸಂಸ್ಥೆಗಳ ಮಧ್ಯೆ ಸಮನ್ವಯ ಕೊರತೆ ಎದುರಾಗಿದೆ. ಆರಂಭದಲ್ಲಿ ಕೆಪಿಟಿಸಿಎಲ್ ವಿದ್ಯುತ್ ಸೌಲಭ್ಯಕ್ಕಾಗಿ ಅನುಮತಿ ನೀಡುವುದಕ್ಕೆ ವಿಳಂಬ ಮಾಡಿತು. ನಂತರ ಸೈಟ್‌ದಾರರಿಗೆ ವಿದ್ಯುತ್ ಸಂಪರ್ಕ ಒದಗಿಸಲು ಬಿಡಿಎ 59 ಕೋಟಿ ರೂ. ಹಣವನ್ನು ಬೆಸ್ಕಾಂಗೆ ಸಂದಾಯ ಮಾಡಿದೆ. ಹೀಗಿದ್ದರೂ, ವಿದ್ಯುತ್ ಸೌಲಭ್ಯ ಕಲ್ಪಿಸಲು ಸಮಸ್ಯೆಗಳ ನೆಪ ಹೇಳಲಾಗುತ್ತಿದೆ. ಸರ್ಕಾರಿ ಸಂಸ್ಥೆಗಳ ಮಧ್ಯೆಯೇ ಸಮನ್ವಯ ಇಲ್ಲದಿರುವುದೇ ಲೇಔಟ್‌ಗೆ ವಿದ್ಯುತ್ ಸೌಕರ್ಯ ಕಲ್ಪಿಸುವುದು ನಿಧಾನವಾಗಿದೆ ಎನ್ನುತ್ತಾರೆ ಎನ್‌ಪಿಕೆಎಲ್ ಓಪನ್ ಫೋರಂ ಪದಾಧಿಕಾರಿ ಸೂರ್ಯಕಿರಣ್.

ವಿದ್ಯುತ್ ಸೌಕರ್ಯದ ವಿವರ:

- ಒಟ್ಟು ಸೈಟ್ ಸಂಖ್ಯೆ - 30 ಸಾವಿರ

- ಒಟ್ಟು ಬ್ಲಾಕ್‌ಗಳು - 9

- ವಿದ್ಯುತ್ ಬೇಡಿಕೆ - 240 ಮೆ.ವ್ಯಾ.

- ವಿದ್ಯುತ್ ಉಪಕೇಂದ್ರ ನಿರ್ಮಾಣ - 5 (66/11 ಕೆವಿ) *

- ಉಪಕೇಂದ್ರಗಳ ಸ್ಥಾಪನೆ ಸ್ಥಳ - ಕೊಮ್ಮಘಟ್ಟ, ಭೀಮನಕುಪ್ಪೆ, ಕನ್ನಳ್ಳಿ, ಸೂಲಿಕೆರೆ, ಸೀಗೇಹಳ್ಳಿ.

- 1 ಉಪಕೇಂದ್ರದಿಂದ ವಿದ್ಯುತ್​​ ಸಂಪರ್ಕ - 8/9 ಸಾವಿರ ಮನೆಗಳು

(* ಒಂದು ಕೇಂದ್ರ ಅಂತಿಮ ಹಂತದಲ್ಲಿದೆ)

ಬಡಾವಣೆಯಲ್ಲಿ ವಿದ್ಯುತ್ ಜಾಲ ಪೂರ್ಣವಾಗಿ ಇಲ್ಲದ ಕಾರಣ ಮನೆ ಕಟ್ಟುವವರಿಗೆ ಸಮಸ್ಯೆಯಾಗಿದೆ. ಬೆಸ್ಕಾಂನಿಂದ ತಾತ್ಕಾಲಿಕ ಸಂಪರ್ಕ ಪಡೆದರೂ, ದೂರದಿಂದ ತಂತಿ ಹಾಕಿಸಿಕೊಳ್ಳಬೇಕಿರುವುದರಿಂದ ಹೆಚ್ಚುವರಿ ಹಣ ವೆಚ್ಚವಾಗುತ್ತಿದೆ. ನಮ್ಮದಲ್ಲದ ತಪ್ಪಿಗೆ ಇತ್ತ ಮನೆಯನ್ನು ಕಟ್ಟಲಾಗದೆ, ಅತ್ತ ಸಾಲ ತೀರಿಸಲೂ ಆಗದೆ ತ್ರಿಶಂಕು ಸ್ಥಿತಿಯಲ್ಲಿದ್ದೇವೆ. ಈಗಲಾದರೂ ಕಾಲಮಿತಿಯೊಳಗೆ ಸೌಲಭ್ಯ ಕಲ್ಪಿಸಲು ಬಿಡಿಎ ಮುಂದಾಗಲಿ.

- ಎಂ.ಇ.ಚನ್ನಬಸವರಾಜ, ಅಧ್ಯಕ್ಷ, ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆ