ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ನಾಡಪ್ರಭು ಕೆಂಪೇಗೌಡರು ಸುಸ್ಥಿರ ಯೋಜನೆಗಳನ್ನು ರೂಪಿಸುವಂಥ ದೂರದೃಷ್ಟಿಯ ಚಿಂತನೆ ಉಳ್ಳವರಾಗಿದ್ದರು. ಕೆಂಪೇಗೌಡರು ಅಂದು ರೂಪಿಸಿದ ಯೋಜನೆಗಳ ಪರಿಣಾಮ ಇಂದು ಬೆಂಗಳೂರು ಜಾಗತಿಕ ಮನ್ನಣೆ ಪಡೆದಿದೆ ಎಂದು ತಹಸೀಲ್ದಾರ್ ಅರ್ಚನಾ ಡಿ.ಭಟ್ ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬಿ.ಸಿ.ರೋಡಿನ ಆಡಳಿತ ಸೌಧದ ಸಭಾಂಗಣದಲ್ಲಿ ಶುಕ್ರವಾರ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿವೃತ್ತ ಪ್ರಾಂಶುಪಾಲ ಪದ್ಮಯ್ಯ ಗೌಡ ಮಾತನಾಡಿ, ಕೇಂಪೇಗೌಡರು ಯುವಕನಾಗಿದ್ದಾಗಲೇ ಬೆಂಗಳೂರು ನಗರ ನಿರ್ಮಾಣ ಕಾರ್ಯದಲ್ಲಿ ತೊಡ ಪೇಟೆಗಳನ್ನು ನಿರ್ಮಿಸಿ ಆಡಳಿತ ಸುಧಾರಣೆಗೆ ಮೇಲ್ಪಂಕ್ತಿ ಹಾಕಿದರು. ತಂತ್ರಜ್ಞಾನ ಇಲ್ಲದ ಕಾಲದಲ್ಲಿ ಕಟ್ಟಿದ ಬೆಂಗಳೂರು ಇಂದು ಜಗತ್ತಿನ ಗಮನ ಸೆಳೆಯತ್ತಿದೆ ಎಂದರು.
ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬೇಬಿ ಕುಂದರ್ ಶುಭಹಾರೈಸಿದರು. ಕೃಷಿಕ ನೀಲಪ್ಪ ಗೌಡ ಅವರನ್ನು ಸನ್ಮಾನಿಸಲಾಯಿತು. ಕುಶಾಲಪ್ಪ ಗೌಡ, ಅಮಿತಕೃಷ್ಣ, ಪುರಸಭೆ ಸದಸ್ಯೆ ಮೀನಾಕ್ಷಿ, ಶಿರಸ್ತೇದಾರ್, ಎಂ.ಶ್ರೀನಿಧಿ, ಉಪತಹಸೀಲ್ದಾರ್ ದಿವಾಕರ ಮುಗುಳಿಯ, ಶಿವಪ್ರಸಾದ್, ಕಂದಾಯ ನಿರೀಕ್ಷಕ ವಿಜಯ್ ಆರ್., ವಿಶುಕುಮಾರ್ ಉಪಸ್ಥಿತರಿದ್ದರು. ಜನಾರ್ದನ ವಂದಿಸಿದರು. ಉಪತಹಸೀಲ್ದಾರ್ ನವಿನ್ ಬೆಂಜನಪದವು ಕಾರ್ಯಕ್ರಮ ನಿರೂಪಿಸಿದರು.