ಕೊಡ್ಲಿಪೇಟೆಯಲ್ಲಿ ನಡೆದ ಕೆಂಪೇಗೌಡರ ದಿನಾಚರಣೆ ಕಾರ್ಯಕ್ರಮದಲ್ಲಿ ಅರಕಲಗೂಡು ಶಾಸಕ ಎ.ಮಂಜು ಮಾತನಾಡಿದರು. ನಾಗೇಶ್, ಶಶಿಧರ್, ಚಂಗಪ್ಪ, ಚಕ್ರವರ್ತಿ ಸುರೇಶ್, ಗಿರೀಶ್ ಮಲ್ಲಪ್ಪ ಇತರರು ಇದ್ದರು. 
ಜಿಲ್ಲೆ

ಸಂಘಟನೆಯಿಂದ ಅಭಿವೃದ್ಧಿ ಸಾಧ್ಯ

ಶನಿವಾರಸಂತೆ: ಸಂಘಟನಾ ಶಕ್ತಿಯಿಂದ ಹಳ್ಳಿಗಳು ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದು ಅರಕಲಗೂಡು ಶಾಸಕ ಎ.ಮಂಜು ಅಭಿಪ್ರಾಯಪಟ್ಟರು.

ಕೊಡ್ಲಿಪೇಟೆ ಒಕ್ಕಳಿಗರ ಯುವ ವೇದಿಕೆಯಿಂದ ಕೆರಗನಹಳ್ಳಿ ಸಮುದಾಯ ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 515ನೇ ಕೆಂಪೇಗೌಡ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಘಟನಾ ಶಕ್ತಿಯಿಂದ ಹಳ್ಳಿಗಳು ಅಭಿವೃದ್ಧಿಯಾಗುತ್ತವೆ. ಈ ನಿಟ್ಟಿನಲ್ಲಿ ಕೆಂಪೇಗೌಡರು ಬೆಂಗಳೂರು ನಿರ್ಮಿಸಿದ ಪರಿಕಲ್ಪನೆಯಲ್ಲಿ ಹಳ್ಳಿಗಳನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕಿದೆ ಎಂದು ಹೇಳಿದರು.

ಕೆಂಪೇಗೌಡರು ನೀಡಿದಂತಹ ಕೊಡುಗೆಯಿಂದಾಗಿ ಬೆಂಗಳೂರು ವಿಶ್ವ ವಿಖ್ಯಾತಿ ಪಡೆದಿದೆ. ಯಾವುದಾದರೊಂದು ನಗರ ಅಭಿವೃದ್ಧಿಯಾಗಬೇಕಾದರೆ ವ್ಯಕ್ತಿಗಳ ಆಲೋಚನೆ ಮೇಲೆ ಅವಲಂಬಿತವಾಗಿರುತ್ತದೆ. ಅಂದಿನ ಕಾಲದಲ್ಲಿ ಬೆಂಗಳೂರು ಅಭಿವೃದ್ಧಿಗೆ ಶ್ರಮಪಟ್ಟಂತಹ ಕೆಂಪೇಗೌಡರ ಮಾರ್ಗದರ್ಶನ ಇಂದಿನ ಯುಪೀಳಿಗೆಗೆ ಅಗತ್ಯ ಇದೆ. ಅವರ ತತ್ವಗಳನ್ನು ಯುವಶಕ್ತಿ ಬಳಸಿಕೊಂಡು ಸಂಘಟನೆ ಮೂಲಕ ಸಮರ್ಥ ನಾಯಕರನ್ನು ನಿರ್ಮಿಸುವ ಶಕ್ತಿ ಯುವ ಸಮುದಾಯವರ ಮೇಲಿದೆ. ಕೆಂಪೇಗೌಡರ ಶ್ರಮಕ್ಕೆ ನಾವು ಸದಾ ಋಣಿಯಾಗಿರಬೇಂಕೆಂದರು.

ಒಕ್ಕಲಿಗರ ಮುಖಂಡ ವಿ.ಪಿ.ಶಶಿಧರ್ ಮಾತನಾಡಿ, ಕೆಂಪೇಗೌಡರ ಸಂಸ್ಕೃತಿಯನ್ನು ಎಂದಿಗೂ ಮರೆಯಬಾರದು. ಅವರ ಸಂಸ್ಕೃತಿ ಇಂದಿನ ಸಂಘಟನಾ ಶಕ್ತಿಯಿಂದ ಉಳಿಯಲು ಸಾಧ್ಯವಾಗುತ್ತದೆ. ಕೆಂಪೇಗೌಡರ ಆದರ್ಶವನ್ನು ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡುವಂತೆ ಕರೆ ನೀಡಿದರು.

ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ.ಚಂಗಪ್ಪ ಮಾತನಾಡಿ, ಕೊಡಗಿನ ಜನರು ಒಗ್ಗಟ್ಟಿನಿಂದ ಕೆಂಪೇಗೌಡರ ಜಯಂತಿ ಆಚರಣೆ ಮಾಡಬೇಕಿದೆ. ಕೆಂಪೇಗೌಡರು ದೂರದೃಷ್ಟಿ ಆಲೋಚನೆಯಿಂದ ಬೆಂಗಳೂರು ನಿರ್ಮಾಣ ಮಾಡಿದ್ದರು. ಅದರ ಫಲವಾಗಿ ಇಂದು ಕೊಡಗಿನ ಜನತೆ ಬೆಂಗಳೂರಿನಲ್ಲಿ ನೆಲೆಸಿ ಅವರ ಜೀವನವನ್ನು ಕಂಡುಕೊಂಡಿದ್ದಾರೆ. ಕೆಂಪೇಗೌಡರ ಮಾರ್ಗದರ್ಶನದಂತೆ ಹೋದರೆ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದರು.

ಕೊಡ್ಲಿಪೇಟೆ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಕೆ.ಎ.ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕ ಬಾಚಳ್ಳಿ ಪ್ರತಾಪ್ ಗೌಡ, ನಿವೃತ್ತ ಸೈನಿಕ ಮಣಿಗನಹಳ್ಳಿ ರಂಗನಾಥ್, ಸೋಮವಾರಪೇಟೆ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಚಕ್ರವರ್ತಿ ಸುರೇಶ್, ಕೊಡ್ಲಿಪೇಟೆ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಆರ್.ಚಂದ್ರಶೇಖರ್, ಕೊಡಗು ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಗಿರೀಶ್ ಮಲ್ಲಪ್ಪ, ಪ್ರಮುಖರಾದ ತೇಜಕುಮಾರ್, ಅರುಣ್ ಕಾಳಪ್ಪ, ಕೆ.ಎನ್.ಮಂಜುನಾಥ್, ಎಂ.ಎಲ್.ಗೌತಮ್, ಕೊಡ್ಲಿಪೇಟೆ ಭಗವಾನ್ ಹಾಜರಿದ್ದರು.