ಹುಣಸೂರು: ನಿಷ್ಠೆ ಮತ್ತು ನಂಬಿಕೆಗೆ ಮತ್ತೊಂದು ಹೆಸರು ನಾಡಪ್ರಭು ಕೆಂಪೇಗೌಡರು ಎಂದು ತಾಲೂಕು ತಹಸೀಲ್ದಾರ್ ಜೆ.ಮಂಜುನಾಥ್ ಅಭಿಪ್ರಾಯಪಟ್ಟರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶುಕ್ರವಾರ ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಜಯನಗರ ಅರಸ ಕೃಷ್ಣದೇವರಾಯರ ಸಂಸ್ಥಾನದ ಸಾಮಂತರಾಜರಾಗಿ ನಾಡಪ್ರಭು ಆಳುತ್ತಿದ್ದರು. ವಿಜಯನಗರ ಅರಸರ ನಂತರವೂ ಇತರ ಸಾಮಂತ ರಾಜ್ಯಗಳು ಸ್ವತಂತ್ರ ರಾಜ್ಯಗಳೆಂದು ಘೋಷಿಸಿಕೊಂಡರೆ ಕೆಂಪೇಗೌಡರು ಮಾತ್ರ ವಿಜಯನಗರ ಸಾಮ್ರಾಜ್ಯಕ್ಕೆ ತಮ್ಮ ನಿಷ್ಠೆಯನ್ನು ಮುಂದುವರಿಸುವ ಮೂಲಕ ನಂಬಿಕೆ ಉಳಿಸಿಕೊಂಡಿದ್ದರು. ಸೈನ್ಯದ ಅವಶ್ಯಕತೆ ಇದ್ದಾಗ ನೆರವು ನೀಡುತ್ತಿದ್ದರು. ಬೆಂಗಳೂರು ನಿರ್ಮಾಣಕ್ಕೆ ಸ್ಫೂರ್ತಿಯಾಗಿದ್ದ ಕೃಷ್ಣದೇವರಾಯರ ಸಾಮ್ರಾಜ್ಯದ ನಂಬಿಕಸ್ತ ಸಾಮಂತರಾಗಿ ಇತಿಹಾಸದಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಜಾತ್ಯತೀತ ಆಡಳಿತ ಕಾರ್ಯಗಳು ಇಂದಿನ ಆಡಳಿತಗಾರರಿಗೂ ಮಾದರಿಯಾಗಿದೆ. ಮುಖ್ಯವಾಗಿ ಉದ್ಯೋಗ, ನೀರಾವರಿ, ನಾಡರಕ್ಷಣೆ, ಧಾರ್ಮಿಕ ಕ್ಷೇತ್ರ ಮತ್ತು ಉದ್ಯಾನವನಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಜಾತಿ ಮತ ಪಂಥಗಳನ್ನು ಮೀರಿ ಆಡಳಿತ ನೀಡಿದ್ದರು ಎಂದು ಸ್ಮರಿಸಿದರು.
ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಗಣೇಶ್‌ಗೌಡ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಕನ್ನಡ ನಾಡಿನ ಅಸ್ಮಿತೆಯಾಗಿದ್ದಾರೆ. ಅಭಿವೃದ್ಧಿಶೀಲ ಮನಸಿನ ನಾಯಕ ಹೇಗೆ ಕಾರ್ಯ ನಿರ್ವಹಿಸಬೇಕೆನ್ನುವುದಕ್ಕೆ ನಾಡಪ್ರಭು ಕೆಂಪೇಗೌಡರು ನಮಗೆ ಮಾದರಿಯಾಗಿ ನಿಲ್ಲುತ್ತಾರೆ ಎಂದರು.
ಸಂಘದ ಉಪಾಧ್ಯಕ್ಷ ಬಿ.ಎಸ್.ಯೋಗಾನಂದಕುಮಾರ್ ಮಾತನಾಡಿ, ಮಹನೀಯರ ಆದರ್ಶಗಳ ಶೇ.1 ಭಾಗವನ್ನಾದರೂ ನಾವೆಲ್ಲರೂ ಅನುಸರಿಸಿದರೆ ಜಯಂತಿಗಳ ಆಚರಣೆಗೆ ಸಾರ್ಥಕತೆ ಸಿಗಲು ಸಾಧ್ಯ. ಆದರೆ ನಾವು ಆದರ್ಶಪಾಲನೆಯಲ್ಲಿ ವಿಮುಖರಾಗುತ್ತಿರುವುದು ದುರಂತದ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಗ್ರೇಡ್- 2 ತಹಸೀಲ್ದಾರ್ ನರಸಿಂಹಯ್ಯ, ಶಿರಸ್ತೇದಾರ್ ಶ್ರೀಪಾದ್, ಪೌರಾಯುಕ್ತೆ ಕೆ.ಮಾನಸಾ, ಮುಖಂಡರಾದ ನಿಂಗರಾಜ ಮಲ್ಲಾಡಿ, ಹೊಸೂರು ಕುಮಾರ್, ಡಿ.ಕೆ.ಕುನ್ನೇಗೌಡ, ಬಿಳಿಕೆರೆ ಪ್ರಸನ್ನ, ಸುನೀತಾ ಜಯರಾಮೇಗೌಡ, ಚಿಕ್ಕಹುಣಸೂರು ಗೋವಿಂದೇಗೌಡ, ಕುಮಾರ್ ಅರಸೇಗೌಡ, ಸತೀಶ್ ಪಾಪಣ್ಣ, ಡಿ.ಕುಮಾರ್, ಕೆಂಪರಾಜು, ಹೊನ್ನಪ್ಪ, ಸತ್ಯಪ್ಪ, ಖಾಲಿದ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯರಾದ ಪಿ.ಆರ್.ರಾಚಪ್ಪ, ಸುಬ್ಬರಾವ್, ವಿ.ಎನ್.ದಾಸ್, ಅದಿಕಾರಿಗಳು ಮತ್ತು ಇತರರು ಹಾಜರಿದ್ದರು.