* ಕೆಂಪೇಗೌಡ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಮುಖಂಡರಿಂದ ಪ್ರತಿಭಟನೆ
ಮಾಗಡಿ
ಪಟ್ಟಣದ ಕೆಂಪೇಗೌಡ ಕೋಟೆಯ ಕಂದಕ ರಕ್ಷಣೆಗೆ ಒತ್ತಾಯಿಸಿ ಕೆಂಪೇಗೌಡ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಕದಕದ ಬಳಿ ಮಂಗಳವಾರ ತಲೆಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಕೆಂಪೇಗೌಡ ಅಭಿವೃದ್ಧಿ ಸಮಿತಿ ರಾಜ್ಯ ಅಧ್ಯಕ್ಷ ಎಚ್. ಎಂ. ಕೃಷ್ಣಮೂರ್ತಿ ಮಾತನಾಡಿ, ಕೆಂಪೇಗೌಡರ ಕೋಟೆಯ ಕಂದಕಕ್ಕೆ ಸುರಿದಿರುವ ತ್ಯಾಜ್ಯವನ್ನು 15 ದಿನಗಳ ಒಳಗೆ ತೆರವುಗೊಳಿಸದಿದ್ದರೆ ತಾಲೂಕು ಕಚೇರಿ, ಪುರಸಭೆ ಮುಂಭಾಗ ಸುರಿಯುವುದಾಗಿ ಎಚ್ಚರಿಕೆ ನೀಡಿದರು.
ಕೆಶಿಪ್ ರಸ್ತೆ ನಿರ್ಮಾಣ ಹಾಗೂ ಪಟ್ಟಣದ ಕಸವನ್ನು ಕಂದಕಕ್ಕೆ ಸುರಿದು ಕೋಟೆಯನ್ನು ನಾಶಮಾಡಲು ಮುಂದಾಗಿದ್ದಾರೆ. ಕೆಂಪೇಗೌಡರು ನಾಡಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಮಾಗಡಿ ಕೋಟೆ ಕಳಶ ಇದ್ದಂತೆ. ತ್ಯಾಜ್ಯ ಸುರಿಯಲು ಪುರಸಭೆಯಲ್ಲಿ ಗೆದ್ದ ಜನನಾಯಕರು ಹೊಣೆಗಾರರಾಗಿದ್ದಾರೆ. ಇವರ ಅಧಿಕಾರದ ದರ್ಪದಿಂದ ಕೋಟೆ ಸರ್ವನಾಶಕ್ಕೆ ನಾಂದಿಯಾಗಿದೆ. ಕೆಂಪೇಗೌಡರು ನಿರ್ಮಿಸಿದ ಕಂದಕದ ಇತಿಹಾಸ ಉಳಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದರು.
ನಾಡಿನ ಜನತೆ ಕೆಂಪೇಗೌಡರ ಕೋಟೆ, ಕಂದಕಗಳನ್ನು ಉಳಿಸಿಕೊಳ್ಳಬೇಕು, ಕರ್ನಾಟಕದಲ್ಲಿ ಕೆಂಪೇಗೌಡರು ನಿರ್ಮಿಸಿದ 40 ಜಾಗಗಳನ್ನು ಐತಿಹಾಸಿಕ ತಾಣಗಳನ್ನಾಗಿ ರಾಜ್ಯ ಸರ್ಕಾರ ಗುರುತಿಸಿದೆ. ಅವುಗಳನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.
ಕೆಶಿಪ್ ರಸ್ತೆ ನಿರ್ಮಾಣಕ್ಕೆ ವಿರೋಧವಿಲ್ಲ. ಆದರೆ, ಕಂದಕ ಮುಚ್ಚಲು ಮುಂದಾಗಿರುವುದಕ್ಕೆ ವಿರೋಧವಿದೆ. ಸರ್ಕಾರ, ಮುಖ್ಯಮಂತ್ರಿ ಗಮನಕ್ಕೆ ತಾರದೆ ಕೆಶಿಪ್ ರಸ್ತೆಯ ಹೆಸರಿನಲ್ಲಿ ಕಂದಕ ಮುಚ್ಚಲಾಗುತ್ತಿದೆ. ಈ ಬಗ್ಗೆ ಸಿಎಂ, ಡಿಸಿಎಂ ಗಮನಕ್ಕೆ ತರಲಾಗುವುದು ಎಂದರು.
ಶಂಕರ ಮಠದ ಶ್ರೀ ಸಿದ್ಧರಾಮ ಚೈತನ್ಯ ಸ್ವಾಮೀಜಿ ಮಾತನಾಡಿ, ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ, ಒಕ್ಕಲಿಗ ಸಂಘ ನಿವೃತ್ತಿ ಅಧಿಕಾರಿಗಳ ಸ್ಥಾನವಾಗಿದೆಯೇ ಹೊರತು ಯಾವುದೇ ಅಭಿವೃದ್ಧಿ ನಡೆಯುತ್ತಿಲ್ಲ. ಕೆಂಪೇಗೌಡರ ಆಳ್ವಿಕೆಯ ಮೂಲ ಸ್ಥಳ ಕೋಟೆಯನ್ನು ಮುಚ್ಚಿಹಾಕುವುದು ಸರಿಯಲ್ಲ. ರಸ್ತೆ ಕಿರಿದಾದರೂ ಸರಿಯೇ, ಆದರೆ, ಕೋಟೆ ಉಳಿಯಬೇಕು. ಇದು ಎಲ್ಲರ ಹೋರಾಟವಾಗಬೇಕು ಎಂದರು.
ಕಂದಕ ಉಳಿಸಲು ನೀಲಿನಕ್ಷೆ ತಯಾರಿಸಿ: ತಾಲೂಕು ರೈತಸಂಘದ ಅಧ್ಯಕ್ಷ ಲೋಕೇಶ್ ಮಾತನಾಡಿ. ಕೆಶಿಪ್ ರಸ್ತೆಗೆ ಯಾರ ವಿರೋಧವಿಲ್ಲ. ಆದರೆ, ಕಂದಕ ಮುಚ್ಚಿ ಕೋಟೆಯ ಸೌಂದರ್ಯಕ್ಕೆ ಧಕ್ಕೆತರುವುದಕ್ಕೆ ನಮ್ಮೆಲ್ಲರ ವಿರೋಧವಿದೆ. ಕೋಟೆಯ ಕಂದಕವನ್ನು ಉಳಿಸಲು ಶೀಘ್ರವೇ ನೀಲಿನಕ್ಷೆ ತಯಾರಿಸಿ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಶರತ್ ಕುಮಾರ್ ಭೆೇಟಿ ನೀಡಿ ಮನವಿ ಸ್ವೀಕರಿಸಿದರು. ಸಾಹಿತಿ ಶೇಕ್ ಮಸ್ತಾನ್, ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಧನಂಜಯ, ಕೆ.ಆರ್.ಪ್ರಸಾದ್ ಗೌಡ, ಕುದೂರು ಶೇಷಪ್ಪ, ಚೋಳನಾಯ್ಕನಹಳ್ಳಿ ಸಿದ್ದರಾಜು, ರಂಗೇಶ್, ಎನ್‌ಇಎಸ್ ಆನಂದ್, ಶಿವರಾಮು, ಗೋಪಿ ಸೇರಿ ಹಲವು ಕನ್ನಡಪರ ಸಂಘಟನೆ, ರೈತಸಂಘಟನೆ ಪದಾಧಿಕಾರಿಗಳು ಇದ್ದರು.