ಸಮಾಜ ಸುಧಾರಣೆಗೆ ಮಹಿಳೆಯರು ಹಲವಾರು ಕೊಡುಗೆಗಳನ್ನು ನೀಡಿ ಅಭಿವೃದ್ಧಿಗೆ ಕೈ ಜೋಡಿಸಿದ್ದಾರೆ ಎಂದು ರಾಜವಂಶಸ್ಥೆ ತ್ರಿಷಿಕಾಕುಮಾರಿದೇವಿ ಒಡೆಯರ್ ಹೇಳಿದರು.
ಅರಸು ಮಂಡಳಿ ಸಂಘದ ವತಿಯಿಂದ ತ್ಯಾಗರಾಜ ರಸ್ತೆಯಲ್ಲಿರುವ ಸಂಘದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಮಾತೋಶ್ರೀ ಶ್ರೀಮತಿ ಕೆಂಪನಂಜಮ್ಮಣ್ಣಿ ವಿಲಾಸ ಸನ್ನಿಧಾನ ಅವರ 157ನೇ ವರ್ಧಂತಿ ಹಾಗೂ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮೈಸೂರು ರಾಜಮನೆತನದ ಕೆಂಪನಂಜಮ್ಮಣ್ಣಿ ವಿಲಾಸ ಸನ್ನಿಧಾನ ಕೂಡ ಪ್ರಮುಖವಾಗಿದ್ದು, ಅವರನ್ನು ಮತ್ತು ಅವರ ಕೊಡುಗೆಗಳನ್ನು ಸ್ಮರಿಸಬೇಕು ಎಂದು ತಿಳಿಸಿದರು.
ಸಮಾಜಮುಖಿ ಕೆಲಸಗಳಿಗೆ ಹಲವಾರು ಕೊಡುಗೆಗಳನ್ನು ನೀಡುವ ಮೂಲಕ, ರಾಜಮನೆತನದ ಕೆಂಪನಂಜಮ್ಮಣ್ಣಿ ವಿಲಾಸ ಸನ್ನಿಧಾನ ಸದಾ ಮಾದರಿಯಾಗಿದ್ದಾರೆ. ಅವರ ಸೇವೆ ಸ್ಮರಿಸಬೇಕು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಬಾಲಕರಾಗಿದ್ದಾಗ ಅಧಿಕಾರವನ್ನು ವಹಿಸಿಕೊಂಡ ಕೆಂಪನಂಜಮ್ಮಣ್ಣಿ ಅವರು, ಆಡಳಿತವನ್ನು ಸುಸೂತ್ರವಾಗಿ ನಿಭಾಯಿಸಿದರು. ಅಲ್ಲದೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಅವರು ಅಪಾರ ಕೊಡುಗೆ ನೀಡಿದ್ದಾರೆ. ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವ ಮೂಲಕ ಅವರ ಆದರ್ಶಗಳನ್ನು ಅನುಕರಣೆ ಮಾಡಬೇಕು. ಅರಸು ಮಂಡಳಿ ಸಂಘದ ಸಮಾಜದ ಸೇವಾ ಕಾರ್ಯಗಳು ಮುಂದುವರಿಯಲಿ. ನಾನು ಕೂಡ ಸಂಘದ ಎಲ್ಲ ಸಾಮಾಜಿಕ ಕೆಲಸಗಳಿಗೆ ಕೈ ಜೋಡಿಸುತ್ತೇನೆ ಎಂದು ಭರವಸೆ ನೀಡಿದರು.
ಶ್ರೀ ಚಾಮರಾಜೇಂದ್ರ ಎಜುಕೇಷನ್ ಟ್ರಸ್ಟ್ ಉಪಾಧ್ಯಕ್ಷೆ ಡಾ.ಭಾರತಿ ಅರಸ್ ಮಾತನಾಡಿ, ಅಭಿವೃದ್ಧಿಯ ಮೂಲಕ ಸಮಾಜವನ್ನು ಕಟ್ಟಬಹುದು ಎಂಬುದನ್ನು ಮೈಸೂರು ರಾಜರು ತೋರಿಸಿದ್ದಾರೆ. ಅದರಂತೆ ಕೆಂಪನಂಜಮ್ಮಣ್ಣಿ ಕತ್ತಿ ಹಿಡಿದು ಹೋರಾಡಲಿಲ್ಲ, ಲೇಖನಿಯಲ್ಲಿ ಬರೆದು ಕ್ರಾಂತಿ ಮಾಡಲಿಲ್ಲ. ಬದಲಾಗಿ ಜನೋಪಯೋಗಿ ಕೆಲಸಗಳನ್ನು ಮಾಡುವ ಮೂಲಕ ಹೆಸರುವಾಸಿಯಾದರು ಎಂದು ತಿಳಿಸಿದರು.
ನಾಲ್ವಡಿ ಕೃಷ್ಣರಾಜರಿಗೆ ರಾಜನೀತಿಯ ಹಿತೋಪದೇಶಗಳನ್ನು ಮಾಡುತ್ತಿದ್ದ ಅವರ ರಾಜಕೀಯ ಮತ್ತು ಸಾಮಾಜಿಕ ಹಿನ್ನೆಲೆಯನ್ನು ವಾಣಿವಿಲಾಸ ಚರಿತ ಕೃತಿಯು ತಿಳಿಸುತ್ತದೆ. ಕೆಂಪನಂಜಮ್ಮಣ್ಣಿ ಅವರ ಸಾಮಾಜಿಕ ಕೆಲಸಗಳನ್ನು ನಾವು ಸದಾ ಸ್ಮರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಜ್ಞಾನಿ ರಾಧಿಕಾ ಮದನ್ ಅರಸ್, ಎಲ್‌ಐಸಿಯ ಸಹಾಯಕ ವಿಭಾಗೀಯ ವ್ಯವಸ್ಥಾಪಕಿ ಬಿ.ಕೆ.ಗಿರಿಜಾ ಅರಸ್, ಶ್ರೀಚಾಮರಾಜೇಂದ್ರ ಎಜುಕೇಷನ್ ಟ್ರಸ್ಟ್ ಟ್ರಸ್ಟಿ ಪದ್ಮಶ್ರೀ ಅರಸ್ ಚಿದಾನಂದ್, ಛಾರ್ವಿ ಡೆಂಟಲ್ ಕೇರ್‌ನ ದಂತ ಚಿಕಿತ್ಸಕಿ ಡಾ.ಎಂ.ವಿ.ಶಿಲ್ಪಾ ಅರಸ್ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕೆಂಪನಂಜಮ್ಮಣ್ಣಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಉಪ ಮೇಯರ್ ಡಾ.ರೂಪಾ ಯೋಗೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಸಂಘದ ಅಧ್ಯಕ್ಷ ಎಸ್.ಲಿಂಗರಾಜೇ ಅರಸ್ ಮತ್ತಿತರರು ಇದ್ದರು.