ಹುಬ್ಬಳ್ಳಿ : ಇಲ್ಲಿನ ಕಾರವಾರ ರಸ್ತೆಗೆ ಹೊಂದಿಕೊಂಡಿರುವ ಕೆಂಪಕೆರೆ ಉದ್ಯಾನವನ್ನು ಬಹುಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು, ಇದೇ ಅಕ್ಟೋಬರ್ನಲ್ಲಿ ಲೋಕಾರ್ಪಣೆ ಮಾಡಲು ಸಿದ್ಧತೆ ಮಾಡಿಕೊಳ್ಳುವಂತೆ ಶಾಸಕ, ಸ್ಲಬ್ ಬೋರ್ಡ್ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಗುರುವಾರ ಕೆಂಪಕೆರೆಗೆ ಭೇಟಿ ನೀಡಿ, ಉದ್ಯಾನದ ಕಾಮಗಾರಿ ವಿಕ್ಷಿಸಿದ ಶಾಸಕ ಅಬ್ಬಯ್ಯ, ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರದಲ್ಲೇ ಕೆಂಪಕೆರೆ ಉದ್ಯಾನ ಒಂದು ಮಹತ್ತರ ಯೋಜನೆಯಾಗಿದೆ. ಹಂತ ಹಂತವಾಗಿ ಹತ್ತಾರು ಕೋಟಿ ರೂ.ಗಳಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು, ಈ ಹಿಂದೆಯೇ ಉದ್ಯಾನ ಉದ್ಘಾಟನೆ ಮಾಡಬೇಕಿತ್ತು. ಕೆಲ ತಾಂತ್ರಿಕ ಸಮಸ್ಯೆ ಮತ್ತು ಅಂತಿಮ ಹಂತದ ಕಾಮಗಾರಿ ವಿಳಂಬವಾಗಿದ್ದರಿಂದ ಉದ್ಘಾಟನೆ ತಡವಾಗಿದೆ ಎಂದು ಹೇಳಿದರು.
ಲೋಕಾರ್ಪಣೆ ವಿಳಂಬವಾದರೆ ಉದ್ಯಾನ ನಿರ್ವಹಣೆಯ ಕೊರತೆಯಿಂದ ಹಾಳಾಗುವ ಪರಿಸ್ಥಿತಿ ನಿರ್ವಣವಾಗುತಿತ್ತು. ಹೀಗಾಗಿ, ಬಾಕಿ ಇರುವ ಅಗತ್ಯ ಕಾಮಗಾರಿಗಳನ್ನು ಈ ತಿಂಗಳ ಕೊನೆಯಲ್ಲಿ ಪೂರ್ಣಗೊಳಿಸಿ, ಅಕ್ಟೋಬರ್ನಲ್ಲಿ ಉದ್ಯಾನ ಉದ್ಘಾಟನೆಗೆ ದಿನಾಂಕ ನಿಗದಿ ಮಾಡುವಂತೆ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅವರಿಗೆ ಹೇಳಿದರು.
ಜಲ ಕಳೆ ತೆಗೆಸಲು ಸೂಚನೆ: ಕೆರೆಯ ಅಂದ ಕೆಡಿಸುತ್ತಿರುವ ರಾಕ್ಷಸಬಳ್ಳಿ ಇಡೀ ಕೆರೆ ಆವರಿಸುವ ಮೊದಲೇ ತೆರವುಗೊಳಿಸಬೇಕು. ಸತತ ಮಳೆಯಿಂದ ಉದ್ಯಾನದಲ್ಲಿ ಬೆಳೆದಿರುವ ಕಸ, ಕಳೆಯನ್ನು ತೆಗೆದು ಸುಂದರಗೊಳಿಸಬೇಕು. ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಉದ್ಯಾನ ಲೋಕಾರ್ಪಣೆ ಮಾಡಿ, ಉದ್ಯಾನ ನಿರ್ವಹಣೆ ಟೆಂಡರ್ ಕರೆಯುವವರೆಗೂ ಪಾಲಿಕೆಯಿಂದಲೇ ಉದ್ಯಾನ ನಿರ್ವಹಣೆ ಮಾಡಬೇಕು. ಕೋಟ್ಯಾಂತರ ರೂ. ಯೋಜನೆ ಇದಾಗಿದ್ದು, ಇದರ ನಿರ್ವಹಣೆ ಉತ್ತಮವಾಗಿರಲಿ ಎಂದರು.
ನಿರ್ವಹಣೆಗೆ ಕೂಡಲೇ ಸಿಬ್ಬಂದಿಯನ್ನು ನೇಮಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
ಹುಡಾ ಆಯುಕ್ತ ಸಂತೋಷ ಬಿರಾದಾರ, ಪಾಲಿಕೆ ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯಕುಮಾರ ಹಾಗೂ ಇತರರು ಹಾಜರಿದ್ದರು.