ರೈತರ ಪಂಪ್‌ಸೆಟ್‌ಗೆ ಅನಿಯಮಿತ ಲೋಡ್ ಶೆಡ್ಡಿಂಗ್ ವಿರೋಧಿಸಿ ಕೆಂಭಾವಿಯಲ್ಲಿ ಸೋಮವಾರ ರೈತರು ಬೃಹತ್ ಪ್ರತಿಭಟನೆ ನಡೆಸಿ, ಸಚಿವ ಶರಣಬಸಪ್ಪ ದರ್ಶನಾಪುರಗೆ ಮನವಿ ಸಲ್ಲಿಸಿದರು. ಭೀಮನಗೌಡ ಕಾಚಾಪುರ, ತೋಟಪ್ಪ ಪೂಜಾರಿ, ನಯುಮ ಖಾಜಿ, ಶಫೀಕ್ ದಫೇದಾರ್, ಶ್ರೀಕಾಂತ ಅಂಗಡಿ, ಬಂಡೋಳಿ ಸಾಹು, ರಮೇಶ ತುಂಬಗಿ, ಕೆಂಚಪ್ಪ ಇತರರಿದ್ದರು. 
ಜಿಲ್ಲೆ

ನಿರಂತರ ವಿದ್ಯುತ್ ಒದಗಿಸಲು ಆಗ್ರಹ

ರಾಜು ಯಮಕನಮರಡಿ

ಕೆಂಭಾವಿ: ರೈತರ ಪಂಪ್‌ಸೆಟ್‌ಗಳಿಗೆ ಅನಿಯಮಿತ ಲೋಡ್ ಶೆಡ್ಡಿಂಗ್ ವಿರೋಧಿಸಿ ಸೋಮವಾರ ಪಟ್ಟಣದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಮೊದಲು ೭ ತಾಸು ನಿರಂತರ ವಿದ್ಯುತ್ ಮೊಟಕುಗೊಳಿಸಿ ಈಗ ೫ ಗಂಟೆ ವಿದ್ಯುತ್ ಒದಗಿಸಲು ಸರ್ಕಾರ ಮುಂದಾಗಿದೆ. ಇದರಿಂದ ರೈತರಿಗೆ ಭಾರಿ ಆಘಾತವಾಗಿದ್ದು, ನೀರಿನ ಕೊರತೆಯಿಂದ ಬೆಳೆಗಳು ಒಣಗುವ ಭೀತಿ ಎದುರಾಗಿದೆ. ಭಾನುವಾರದಿಂದ ಮಧ್ಯರಾತ್ರಿ ವಿದ್ಯುತ್ ನೀಡುತ್ತಿದ್ದರಿಂದ ಹೊಲಗದ್ದೆಗಳಿಗೆ ನೀರು ಬಿಡುವುದು ತೀವ್ರ ಸಮಸ್ಯೆಯಾಗಿದ್ದು, ಕೂಡಲೇ ನಿರಂತರ ವಿದ್ಯುತ್ ಒದಗಿಸಬೇಕು ಎಂದು ಒತ್ತಾಯಿಸಿದರು.

ಭೀಮನಗೌಡ ಕಾಚಾಪುರ, ತೋಟಪ್ಪ ಪೂಜಾರಿ, ನಯುಮ ಖಾಜಿ, ಶಫೀಕ್ ದಫೇದಾರ್, ಶ್ರೀಕಾಂತ ಅಂಗಡಿ, ಬಂಡೋಳಿ ಸಾಹು, ರಮೇಶ ತುಂಬಗಿ, ಕೆಂಚಪ್ಪ, ಅಂಬಲಯ್ಯ ಘಂಟಿ, ನಿಂಗಪ್ಪ ಪೂಜಾರಿ, ಯಲ್ಲಪ್ಪ ಕವಾಲ್ದಾರ, ಸಂತೋಷ ಹೊಸಮನಿ, ಶ್ರೀಶೈಲ ಮಲಕಾಪುರ, ಮಂಜುನಾಥ ದೇಸಾಯಿ ಇತರರಿದ್ದರು.

ಅಧಿಕಾರಿಗಳಿಗೆ ಸಚಿವ ಶರಣಬಸಪ್ಪ ತಾಕೀತು: ಹೆಗ್ಗಣದೊಡ್ಡಿ ಗ್ರಾಮದಿಂದ ಕೆಂಭಾವಿಗೆ ಆಗಮಿಸುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ರೈತರ ಪ್ರತಿಭಟನೆ ಸುದ್ದಿ ಕೇಳಿ ಸ್ಥಳಕ್ಕಾಗಮಿಸಿ ಸಮಸ್ಯೆ ಆಲಿಸಿ, ಈಗಾಗಲೇ ನಿರಂತರ ೫ಗಂಟೆ ವಿದ್ಯುತ್ ಒದಗಿಸುವಂತೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ಇದಕ್ಕೆ ಇಲಾಖೆ ಕಾರ್ಯಪೃವೃತ್ತವಾಗಿದೆ ಎಂದರು. ಮಧ್ಯರಾತ್ರಿ ರೈತರಿಗೆ ನೀಡುತ್ತಿದ್ದ ವಿದ್ಯುತ್ ಬಂದ್ ಮಾಡಿ ಹಗಲಿನಲ್ಲಿಯೇ ನಿರಂತರ ವಿದ್ಯುತ್ ಪೂರೈಕೆ ಮಾಡುವಂತೆ ಸ್ಥಳದಲ್ಲಿದ್ದ ಜೆಸ್ಕಾಂ ಅಧಿಕಾರಿಗೆ ಕಟ್ಟುನಿಟ್ಟಿನ ಆದೇಶ ನೀಡಿದ ತಕ್ಷಣ ರೈತರು ಪ್ರತಿಭಟನೆ ಹಿಂಪಡೆದರು. ಈ ಕುರಿತು ಬರೆದ ಮನವಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ಪ್ರತಿಭಟನಾಕಾರರು ಸಲ್ಲಿಸಿದರು.