ಚಿಕ್ಕಮಗಳೂರಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸ್ವಚ್ಛ್ ಭಾರತ್ ಮಿಷನ್ ಅಭಿಯಾನದ ಅಂಗವಾಗಿ ಸೋಮವಾರ ಸ್ವಚ್ಛತಾ ಹಿ ಸೇವಾ ೨೦೨೪ರ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. ಬಿ.ಸಿ.ಭಾನುಮತಿ, ವಿ.ಹನುಮಂತಪ್ಪ, ಮಂಜುನಾಥ್, ಡಿ.ಬಿ.ಸುಜೇಂದ್ರ, ಅನಿಲ್‌ಕುಮಾರ್, ಶರತ್‌ಚಂದ್ರ ಮತ್ತಿತರರಿದ್ದರು. 
ಜಿಲ್ಲೆ

ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿರಿಸಿಕೊಳ್ಳಿ

ನಿತ್ಯಾನಂದ ಎಸ್.ಎನ್.

ಚಿಕ್ಕಮಗಳೂರು: ಗಾಂಧೀಜಿಯವರು ಕಂಡ ಸ್ವಚ್ಛ ಭಾರತ ನಿರ್ಮಾಣದ ಕನಸನ್ನು ಇಂದು ನಾವೆಲ್ಲರೂ ಸಾಕಾರಗೊಳಿಸಬೇಕಾಗಿದೆ. ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು ಎಂದು ಜಿಲ್ಲಾ ಪ್ರಭಾರ ಪ್ರಧಾನ ಮತ್ತು ಸತ್ರ ನ್ಯಾಯಧೀಶೆ ಬಿ.ಸಿ.ಭಾನುಮತಿ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾ ವಕೀಲರ ಸಂಘ, ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸ್ವಚ್ಛ್ ಭಾರತ್ ಮಿಷನ್ ಅಭಿಯಾನದ ಅಂಗವಾಗಿ ಸೋಮವಾರ ನಗರದ ಕೋರ್ಟ್ ಆವರಣದಲ್ಲಿ ಆಯೋಜಿಸಲಾಗಿದ್ದ ಸ್ವಚ್ಛತಾ ಹಿ ಸೇವಾ ೨೦೨೪ರ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶಾದ್ಯಂತ ಸಾರ್ವಜನಿಕ ಆಸ್ತಿಗಳು, ರಸ್ತೆಗಳು ಮತ್ತು ಸಮಾಜವನ್ನು ಸ್ವಚ್ಛವಾಗಿಡುವುದು ಮತ್ತು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಮೂಲ ಉz್ದೆÃಶದಿಂದ ಕೇಂದ್ರ ಸರ್ಕಾರವು ಸ್ವಚ್ಛ ಭಾರತ ಅಭಿಯಾನವನ್ನು ಆರಂಭಿಸಿದೆ. ಸ್ವಚ್ಛತೆಯನ್ನು ಕಾಪಾಡುವುದರಿಂದ ಕೊಳಚೆಯಿಂದ ಹರಡುವ ಹಲವಾರು ಕಾಯಿಲೆಗಳನ್ನು ನಿಯಂತ್ರಿಸಬಹುದಾಗಿದೆ ಎಂದರು.
ಉತ್ತಮ ಆಲೋಚನೆಗಳಿಂದ ಮಾನಸಿಕವಾಗಿ ಆರೋಗ್ಯವಂತರಾಗಿರಬಹುದು. ಶ್ರಮ ಹಾಗೂ ಪೌಷ್ಠಿಕ ಆಹಾರ ಸೇವನೆಯಿಂದ ದೇಹವನ್ನು ಸದೃಢವಾಗಿರಿಸಿಕೊಳ್ಳಬಹುದು. ಹಾಗೆಯೇ ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಕಸಮುಕ್ತ ಮಾಡಿ ಸ್ವಚ್ಛತೆಯನ್ನು ಕಾಪಾಡುವುದರಿಂದ ಉತ್ತಮ ಆರೋಗ್ಯದೊಂದಿಗೆ ದೇಶದ ಅಭಿವೃದ್ಧಿಗೆ ಕಾರಣವಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಿ ನೈರ್ಮಲ್ಯವನ್ನುಂಟು ಮಾಡದೆ ಸ್ವಚ್ಛತೆಯನ್ನು ಕಾಪಾಡಿ ಗಾಂಧೀಜಿ ಅವರು ಕಂಡ ಕನಸಿನ ಸ್ವಚ್ಛ ಭಾರತ ನಿರ್ಮಾಣದಲ್ಲಿ ಪ್ರತಿಯೊಬ್ಬರು ಸಹಕರಿಸಬೇಕು ಎಂದು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ ಮಾತನಾಡಿ, ನಾವು ವಾಸಿಸುವ ಮನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವುದು ಪ್ರತಿಯೊಬ್ಬ ನಾಗರೀಕನ ಆದ್ಯ ಕರ್ತವ್ಯ. ನಗರ ಪ್ರದೇಶಗಳ ಸ್ವಚ್ಛತೆಗೆ ಕಾರಣೀಕೃತರಾದ ಪೌರಕಾರ್ಮಿಕರ ಕಾರ್ಯ ತುಂಬಾ ಶ್ಲಾಘನೀಯವಾದದ್ದು. ಪ್ರತಿಯೊಂದು ಕೆಲಸಕ್ಕೂ ತನ್ನದೇ ಆದ ಗೌರವವಿದೆ. ತಮ್ಮ ದೈನಂದಿನ ಚಟುವಟಿಕೆಗಳನ್ನು ಸ್ವಚ್ಚತೆಗಾಗಿ ಮೀಸಲಿಟ್ಟಿರುವ ಪೌರಕಾರ್ಮಿಕರನ್ನು ಪ್ರತಿಯೊಬ್ಬರು ಗುರುತಿಸಿ ಗೌರವಿಸಬೇಕು. ಅವರು ಪರಿಸರವನ್ನು ಸ್ವಚ್ಛವಾಗಿರಿಸಿಕೊಂಡು ಆರೋಗ್ಯಯುತ ಜೀವನವನ್ನು ನಿರ್ವಹಿಸಿ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಬಿ ಸುಜೇಂದ್ರ ಮಾತನಾಡಿ, ನೈರ್ಮಲ್ಯವು ಅನಾರೋಗ್ಯಕ್ಕೆ ಮುಖ್ಯ ಕಾರಣವಾಗಿದೆ. ಆರೋಗ್ಯದ ಸಮಸ್ಯೆಯು ದೇಶದ ಜನರನ್ನು ಅಶಕ್ತರನ್ನಾಗಿ ಮಾಡಿದೆ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ಹಾಗೂ ಕಸವಿರದಂತೆ ಗಮನ ಹರಿಸಿ ಸ್ವಚ್ಛ ಪರಿಸರ ನಿರ್ಮಿಸಿಕೊಳ್ಳಬೇಕು. ತಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿರಿಸಿದ್ದಲ್ಲಿ ಸದೃಢ ದೇಹ ಮತ್ತು ಮನಸ್ಸನ್ನು ಹೊಂದಬಹುದು. ಪ್ರತಿಯೊಬ್ಬರು ಸ್ವಚ್ಛ ಭಾರತ ನಿರ್ಮಾಣದಲ್ಲಿ ಭಾಗಿಯಾಗಿ ದೇಶದ ಅಭಿವೃದ್ಧಿಗೆ ಸಹಕರಿಸಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ೨ನೇ ಹೆಚ್ಚುವರಿ ಜಿಲ್ಲಾ ಪ್ರಭಾರ ಪ್ರಧಾನ ಮತ್ತು ಸತ್ರ ನ್ಯಾಯಾದೀಶರಾದ ಮಂಜುನಾಥ್, ವಕೀಲ ಸಂಘದ ಉಪಾಧ್ಯಕ್ಷ ಶರತ್ ಚಂದ್ರ, ವಕೀಲ ಸಂಘದ ಕಾರ್ಯದರ್ಶಿ ಅನಿಲ್ ಕುಮಾರ್ ಮತ್ತಿತರರಿದ್ದರು.