ಜಿಲ್ಲೆ

ಸುಸ್ಥಿಯಲ್ಲಿ ಇರಲಿ ಆರ್‌ಒ ಘಟಕಗಳು

Davangere - Desk - Mahesh Babu E

ಚಿತ್ರದುರ್ಗ: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸುಸ್ಥಿತಿಯಲ್ಲಿ ಇರಿಸಿಕೊಳ್ಳಬೇಕು ಎಂದು ಜಿಪಂ ಸಿಇಒ ಸೋಮಶೇಖರ್ ಅಧಿಕಾರಿಗಳಿಗೆ ಸೂಚಿಸಿದರು.

ಚಳ್ಳಕೆರೆ ತಾಲೂಕಿನ ಸಾಣಿಕೆರೆ, ಬೆಳೆಗೆರೆ, ಹಿರಿಯೂರು ತಾಲೂಕಿನ ಬುರುಜಿನರೊಪ್ಪ ಸೇರಿ ವಿವಿಧ ಗ್ರಾಪಂ ವ್ಯಾಪ್ತಿಯ ಹಳ್ಳಿಗಳು, ಕಚೇರಿಗಳು, ಶಾಲೆಗಳಿಗೆ ಶನಿವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗ್ರಾಮೀಣ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಮೇಲ್ಮಟ್ಟದ, ಕೆಳಮಟ್ಟದ ಎಲ್ಲ ನೀರು ಸಂಗ್ರಹಾಗಾರಗಳನ್ನು, ಚರಂಡಿಗಳನ್ನು ಆಗಿಂದಾಗ್ಗೆ ಸ್ವಚ್ಛಗೊಳಿಸಬೇಕು. ಆರ್‌ಒ ಘಟಕಗಳು ಕೆಟ್ಟು ಹೋಗಿರುವ ಕುರಿತು ದೂರುಗಳು ಕೇಳಿಬಂದಲ್ಲಿ ತಕ್ಷಣ ಸ್ಪಂದಿಸಿ, ದುರಸ್ತಿಗೆ ಮುಂದಾಗಬೇಕು ಎಂದು ತಾಕೀತು ಮಾಡಿದರು.

ಕುಡಿಯುವ ನೀರಿನ ಗುಣಮಟ್ಟ ಕೂಡ ನಿಗದಿತ ಅವಧಿಗೆ ಮುನ್ನ ಪರೀಕ್ಷೆಗೆ ಒಳಪಡಿಸಬೇಕು. ಅದಕ್ಕಾಗಿ ಶೀಘ್ರದಲ್ಲೇ ಹೊಸ ಎಫ್‌ಟಿಕೆ ಕಿಟ್ ಪೂರೈಸಲಾಗುವುದು. ಗ್ರಾಪಂಗಳಿಗೆ ಸಕಾಲದಡಿ ವಿವಿಧ ಸೇವೆಗಳಿಗಾಗಿ ಸಲ್ಲಿಕೆಯಾಗುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು.

ಗ್ರಾಮ ಸಭೆಗಳಲ್ಲಿ ಹರ್ ಘರ್ ಜಲ್ ಘೋಷಿಸಬೇಕು. ಗ್ರಾಪಂಗಳು ಪಿಒಎಸ್ ಯಂತ್ರಗಳನ್ನು ಬಳಸಿ, ತೆರಿಗೆ ಸಂಗ್ರಹಿಸುವ ಕಾರ್ಯ ಸಮರ್ಪಕವಾಗಿ ಕೈಗೊಳ್ಳಬೇಕು. ಈ ಕುರಿತು ಯಾವುದೇ ದೂರುಗಳಿಗೆ ಅವಕಾಶ ಕಲ್ಪಿಸಬಾರದು ಎಂದರು.

ಉದ್ಯೋಗ ಖಾತ್ರಿ ಯೋಜನೆಯಡಿ ಬೇಡಿಕೆ ಅನುಸಾರ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಉದ್ಯೋಗ ನೀಡಬೇಕು. ಹೆಚ್ಚೆಚ್ಚು ಮಾನವ ದಿನಗಳನ್ನು ಸೃಜಿಸಬೇಕು. ನಿಗದಿತ ಅವಧಿಯಲ್ಲೇ ಕೂಲಿ ಹಣ ಪಾವತಿಸಬೇಕು. ವೈಯಕ್ತಿಕ ಶೌಚಗೃಹ ನಿರ್ಮಾಣಕ್ಕಾಗಿ ಫಲಾನುಭವಿಗಳಿಂದ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಶೀಲಿಸಿ, ತಕ್ಷಣ ಕಾರ್ಯಾದೇಶ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಪಂ ಉಪಕಾರ್ಯದರ್ಶಿ ತಿಮ್ಮಪ್ಪ, ಮುಖ್ಯ ಯೋಜನಾಧಿಕಾರಿ ಸತೀಶ್ ರೆಡ್ಡಿ ಇತರರಿದ್ದರು.