ಜಿಲ್ಲೆ

ಸುತ್ತಲ ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳಿ

ಪ್ರಸಿನ್ ಕೆ.ಆರ್

ಶ್ರೀರಂಗಪಟ್ಟಣ: ಮಳೆಗಾಲದಲ್ಲಿ ವಿವಿಧ ರೀತಿಯ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಹಿನ್ನೆಲೆ ಪರಿಸರವನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಸಂಜೀವಪ್ಪ ಹೇಳಿದರು.

ಮೈ-ಬೆಂ ಹೆದ್ದಾರಿಯ ಕಿರಂಗೂರು ವೃತ್ತದ ಬನ್ನಿಮಂಟಪ ಬಳಿ ಶುಕ್ರವಾರ ಜಿಲ್ಲಾ ಪಂಚಾಯಿತಿ ವತಿಯಿಂದ ಜಿಲ್ಲಾದ್ಯಂತ ಒಂದು ವಾರ ಹಮ್ಮಿಕೊಂಡಿರುವ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಮೈಸೂರು ಜಿಲ್ಲೆಯಲ್ಲಿ ಇತ್ತೀಚೆಗೆ ಕಾಲರಾ ಪ್ರಕರಣಗಳು ಕಂಡು ಬಂದ ಹಿನ್ನೆಲೆ ಮಂಡ್ಯ ಜಿಲ್ಲೆಯಲ್ಲೂ ಶುದ್ಧ್ದ ಕುಡಿಯುವ ನೀರಿನ ಕುರಿತು ಒಂದು ವಾರಗಳ ಕಾಲ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಮಳೆನೀರು ನಿಂತ ಸ್ಥಳಗಳಲ್ಲಿ ಸೂಕ್ಷ್ಮಾಣು ಜೀವಿಗಳ ಉತ್ಪತ್ತಿ ಹೆಚ್ಚಾಗಿರುವುದರಿಂದ ಚರಂಡಿ, ನೀರು ಶೇಖರಣೆಯಾಗುವ ವಸ್ತುಗಳನ್ನು ವಿಲೇವಾರಿ ಹಾಗೂ ಜನದಟ್ಟಣೆ ಇರುವ ಸರ್ಕಾರಿ ಕಚೇರಿಗಳಲ್ಲಿ ಮುಂಜಾಗ್ರತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ವೇಣು ಮಾತನಾಡಿ, ಗ್ರಾಮ ನೈರ್ಮಲ್ಯ ಕಾಪಾಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ನೀರು ತುಂಬಿದ ಚರಂಡಿ, ಹಳ್ಳ-ಗುಂಡಿಗಳು, ಹಳೆಯ ಟೈರುಗಳು, ತೆಂಗಿನ ಚಿಪ್ಪು, ನೀರಿನ ತೊಟ್ಟಿಗಳು, ಮನೆಯ ಹಿತ್ತಲು ಸೇರಿದಂತೆ ಇತರೆ ಸ್ಥಳಗಳು ಸೊಳ್ಳೆಯ ಸಂತತಿಗೆ ಉತ್ಪತ್ತಿಗೆ ಕಾರಣವಾಗಿದ್ದು, ಆರೋಗ್ಯದ ದೃಷ್ಟಿಯಿಂದ ಜಾಗೃತಿ ವಹಿಸಬೇಕು ಎಂದರು.

ತಾಲೂಕಿನ ಪಿ.ಹೊಸಹಳ್ಳಿ, ಕೆ.ಶೆಟ್ಟಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ತ್ಯಾಜ್ಯಗಳ ತೆರವು ಹಾಗೂ ಗಿಡಗಂಟೆಗಳ ತೆರವುಗೊಳಿಸುವ ನ್ನು ಕತ್ತರಿಸಿ ಪಂಚಾಯಿತಿ ಕರ್ಮಚಾರಿಗಳಿಂದ ತೆರವುಗೊಳಿಸಲಾಯಿತು.

ಕಿರಂಗೂರು ಗ್ರಾಪಂ ಪಿಡಿಒ ಪ್ರಶಾಂತ ಬಾಬು, ಮಹಾದೇಪುರ ಗ್ರಾಪಂ ಪಿಡಿಒ ನಾಗೇಂದ್ರ ಇತರರು ಇದ್ದರು.