ಜಿಲ್ಲೆ

ಪರಿಸರ ಶುದ್ಧವಾಗಿಟ್ಟುಕೊಳ್ಳುವ ಕಾರ್ಯವಾಗಲಿ

ಬಸವರಾಜ ವೀರಪ್ಪ ಗರಗ

ಸಿದ್ದಾಪುರ: ಪರಿಸರದ ಆಧಾರದ ಮೇಲೆ ನಮ್ಮ ಉಸಿರು ನಿಂತಿದೆ. ನೆಲ-ಜಲ-ಬೆಂಕಿ-ಗಾಳಿ-ಆಕಾಶವೆಂಬ ಪಂಚಭೂತಗಳ ಆಶ್ರಯದಲ್ಲಿ ನಾವು ಬದುಕಬೇಕಾಗಿದೆ. ಅವುಗಳನ್ನು ಶುದ್ಧವಾಗಿ ಇಟ್ಟುಕೊಳ್ಳುವ ಹೊಣೆಯೂ ನಮ್ಮದಾಗಿದೆ. ಲಕ್ಷಾಂತರ ವರ್ಷಗಳಿಂದ ವಿಕಾಸ ಹೊಂದಿದ ಸಸ್ಯಾವರಣ, ಪಶು-ಪಕ್ಷಿ ಮೊದಲಾದವುಗಳು ಇನ್ನೂ ಲಕ್ಷಾಂತರ ವರ್ಷಗಳವರೆಗೆ ಬಾಳಬೇಕು. ಈ ಎಚ್ಚರಿಕೆಯಲ್ಲಿ ಮನುಷ್ಯ ಯೋಚಿಸಿ ಹೆಜ್ಜೆ ಇಡಬೇಕಾಗಿದೆ ಎಂದು ಗ್ರಾಮೀಣ ಸಸ್ಯಶಾಸ್ತ್ರಜ್ಞ ಯಕ್ಷಗಾನ ಕಲಾವಿದ ಮಹಾಬಲೇಶ್ವರ ಭಟ್ಟ ಇಟಗಿ ಹೇಳಿದರು.

ತಾಲೂಕಿನ ಬೇಡ್ಕಣಿ ಜನತಾ ವಿದ್ಯಾಲಯದಲ್ಲಿ ಕಲಾಭಾಸ್ಕರ ಇಟಗಿಯವರು ಶನಿವಾರ ಆಯೋಜಿಸಿದ್ದ ಔಷಧ ಸಸ್ಯಗಳ ಪ್ರಾತ್ಯಕ್ಷಿಕೆಯಲ್ಲಿ ಅವರು ಮಾತನಾಡಿದರು. ಮನುಷ್ಯನಿಗೆ ಅನ್ನ, ವಸತಿ, ಔಷಧ ಮೊದಲಾದವುಗಳೇಕೆ ಉಸಿರಾಡಲು ಶುದ್ಧ ಆಮ್ಲಜನಕವನ್ನೂ ಕೊಡುವ ಸಸ್ಯಾವರಣವು ಅಮೂಲ್ಯವಾದುವು. ಸಣ್ಣ ಪುಟ್ಟದ್ದಕ್ಕೂ ವೈದ್ಯರ ಮನೆಗೆ ಅಲೆಯದೆ ಸುತ್ತಲಿನ ಸಸ್ಯಮೂಲದಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಸಸ್ಯಗಳನ್ನು ಗುರುತಿಸುವಾಗ ಬಹಳ ಎಚ್ಚರಿಕೆ ಬೇಕು. ಇಲ್ಲದಿದ್ದರೆ ಅನಾಹುತ ಆಗುವ ಸಾಧ್ಯತೆಯೇ ಹೆಚ್ಚು ಹಾಗಾಗಿ ನಾವೆಲ್ಲರೂ ಸಸ್ಯಗಳ ಗುರುತಿಸುವಿಕೆಯನ್ನು ತಿಳಿದುಕೊಳ್ಳಬೇಕು ಎಂದು ಹೇಳಿ ಮೂವತ್ತಕ್ಕೂ ಹೆಚ್ಚು ಸಸ್ಯಗಳ ಮಾದರಿಗಳನ್ನು ಪರಿಚಯಿಸಿ ಬಳಕೆಯ ಕುರಿತು ಮಾಹಿತಿ ನೀಡಿದರು.

ಶಿಕ್ಷಕ ಜಿ.ಟಿ. ಭಟ್ಟ ಕಡತೋಕಾ ಹದಿಹರೆಯದವರ ಸಮಸ್ಯೆ ಕುರಿತು ಮಾಹಿತಿ ನೀಡಿದರು. ಮುಖ್ಯಾಧ್ಯಾಪಕಿ ಪ್ರತಿಭಾ ಪಾಲೇಕರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಲತಾ ಇತರರಿದ್ದರು.