ಶ್ರೀರಂಗಪಟ್ಟಣ : ಮಳೆಗಾಲದಲ್ಲಿ ಜನರು ರೋಗ ಮುಕ್ತವಾಗಿರಲು ತಮ್ಮ ಮನೆ, ಸುತ್ತಲ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವ ಜತೆಗೆ ಎಲ್ಲರೂ ಶುಚಿಯಾಗಿರಬೇಕು ಎಂದು ಮಕ್ಕಳ ತಜ್ಞ, ಹಿರಿಯ ಗಾಂಧಿವಾದಿ ಡಾ.ಸುಜಯ್ ಕುಮಾರ್ ತಿಳಿಸಿದರು.
ಪಟ್ಟಣದಲ್ಲಿ ಶುಕ್ರವಾರ ಮೈಸೂರಿನ ಶೇಷಾದ್ರಿಪುರಂ ಪದವಿ ಕಾಲೇಜು ಎನ್‌ಎಸ್‌ಎಸ್ ಘಟಕ, ಅಚೀವರ್ಸ್ ಅಕಾಡೆಮಿ ಹಾಗೂ ಶ್ರೀರಂಗಪಟ್ಟಣ ರೋಟರಿವತಿಯಿಂದ ಡೆಂೆ ಜ್ವರ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಳೆ ಸುರಿದಾಗ ಅಥವಾ ಇನ್ಯಾವುದೇ ಕಾರಣದಿಂದ ಮನೆಯ ಅಕ್ಕ-ಪಕ್ಕ, ಹಳೆಯ ಟೈಯರ್, ಚರಂಡಿ ಸೇರಿದಂತೆ ಎಲ್ಲೆಂದರಲ್ಲಿ ನೀರು ನಿಲ್ಲುವ ಕಾರಣ ಸೊಳ್ಳೆ ಹಾಗೂ ಕ್ರಿಮಿ ಕೀಟಗಳ ಉತ್ಪತ್ತಿಯಿಂದ ಡೆಂಘಿ, ಮಲೆರಿಯಾ ಅಥವಾ ಇತರ ಸಾಂಕ್ರಮಿಕ ಖಾಯಿಲೆಗಳ ಹರಡುತ್ತವೆ. ಇವುಗಳ ತಡೆಗೆ ಜನರೇ ಕ್ರಮ ವಹಿಸಿ ಆರೋಗ್ಯದ ಬಗ್ಗೆ ಜಾಗೃತರಾಗಬೇಕು ಎಂದು ಸಲಹೆ ನೀಡಿದರು.
ಪಟ್ಟಣದ ಪ್ರಮುಖ ರಸ್ತೆಗಳು ಹಾಗೂ ವಿವಿಧ ಬಡಾವಣೆಯ ಮನೆಮನೆಗೆ ಕರಪತ್ರಗಳನ್ನ ವಿತರಿಸಿ ಜಾಗೃತಿ ಮೂಡಿಸಲಾಯಿತು. ಜತೆಗೆ ನಾಡಪ್ರಭು ಕೆಂಪೇಗೌಡ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಜಾಗೃತಿ ಘೋಷ ವಾಕ್ಯಗಳನ್ನು ಕೂಗಲಾಯಿತು. ಕೆಲ ಸ್ಥಳಗಳಲ್ಲಿ ನಿಂತ ನೀರನ್ನು ಖುದ್ದು ವಿದ್ಯಾರ್ಥಿಗಳೇ ಪೊರಕೆಯಲ್ಲಿ ತೆರವುಗೊಳಿಸಿ ಶುಚಿತ್ವದ ಬಗ್ಗೆ ಅರಿವುದ ಮೂಡಿಸಿದರು.
ರಾಷ್ಟ್ರಪತಿ ಪದಕ ವಿಜೇತ, ರಾಷ್ಟ್ರೀಯ ಸ್ವಯಂ ಸೇವಾಧಿಕಾರಿ ಡಾ.ರಾಘವೇಂದ್ರ ದೇವರಾಜು, ಗುರುಪ್ರಸಾದ್, ಸತೀಶ್, ಶ್ರೀಧರ್, ಹರೀಶ್, ಎನ್‌ಎಸ್‌ಎಸ್ ಸ್ವಯಂಸೇವಕರಾದ ದಿವಿತ್, ವಿನಯ್, ನಿತಿನ್ ಕೃಷ್ಣ, ವಿದ್ಯಾ, ದಿಲೀಪ್, ಪ್ರಶಾಂತ್, ನಂದೀಶ್, ಭರತ್, ಇತರರು ಇದ್ದರು.