ರಾಮನಗರ : ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಿ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಸ್ಥಾಪಕ ಅಧ್ಯಕ್ಷ ಚಿಕ್ಕಣ್ಣಯ್ಯ ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಾಮನಗರ ತಾಲೂಕು, ಜಿಲ್ಲಾ ಜನಜಾಗೃತಿ ವೇದಿಕೆ, ರಾಮನಗರ ಜಿಲ್ಲೆ, ಪುರ ಪೊಲೀಸ್ ಠಾಣೆ ರಾಮನಗರ, ಇವರ ಸಹಯೋಗದಲ್ಲಿ ಗುರುವಾರ ಗೌಸಿಯಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಾವುದೇ ರೀತಿಯ ದುಶ್ಚಟಗಳ ದುರಬ್ಯಾಸದ ಚಟ ವಿದ್ಯಾರ್ಥಿಗಳಲ್ಲಿ ಬರುವುದು ಬೇಡ. ಪ್ರೌಢಾವಸ್ಥೆಯ ಹಂತದಲ್ಲಿ ಕುತೂಹಲಕಾರಿ ಹಾಗೂ ಚಂಚಲ ಮನಸ್ಸು ಈ ಸಮಯದಲ್ಲಿ ಮೂಡುತ್ತದೆ. ಹಾಗಾಗಿ ಈ ವಯೋಮಾನವನ್ನ ದುಶ್ಚಟಮುಕ್ತವಾಗಿ ಕನಿಷ್ಠ ಪಕ್ಷ 25 ವರ್ಷ ವಯೋಮಾನ ಮುಗಿಸಿದರೆ ಜೀವನ ಪರ್ಯಂತ ಬೀಡಿ, ಸಿಗರೇಟ್, ಗುಟ್ಕಾ, ಪಾನ್ ಮಸಾಲ, ಇತರೇ ತಂಬಾಕು ಪದಾರ್ಥಗಳ ಸೇವನೆಯ ದುರಬ್ಯಾಸದ ಕಡೆ ಗಮನ ಬರುವುದಿಲ್ಲ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿ ದುಶ್ಚಟಗಳಿಂದ ದೂರವಿರಿ ಎಂದು ತಿಳಿಸಿದರು.
ರಾಮನಗರ ಪುರ ಪೋಲಿಸ್ ಠಾಣೆ ಎಎಸ್‌ಐ ಯೋಗೇಶ್ ತಂಬಾಕು ಉತ್ಪನ್ನಗಳ ಬಳಕೆುಂದಾಗುವ ದುಷ್ಪರಿಣಾಮಗಳು ಹಾಗೂ ಕಾನೂನಿನಲ್ಲಿ ಅದಕ್ಕೆ ಇರುವ ಶಿಕ್ಷೆಗಳ ಕುರಿತು ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿದರು. ತಂಬಾಕು ನಿಯಂತ್ರಣ ಮಂಡಳಿ ಘಟಕದ ಮನಶಾಸ್ತ್ರಜ್ಞ ಚಂದ್ರಶೇಖರ್ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.
ಗೌಸಿಯಾ ಕಾಲೇಜಿನ ಪ್ರಾಂಶುಪಾಲ ನಜರತ್ ಉಲ್ಲಾ ಖಾನ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಜಯಕರ್ ಶೆಟ್ಟಿ, ಜನಜಾಗೃತಿ ವೇದಿಕೆ ಪದಾಧಿಕಾರಿಗಳಾದ ಬಿಡದಿ ಮಂಜುನಾಥ್, ಚಂದ್ರು, ತಾಲೂಕು ಯೋಜನಾಧಿಕಾರಿ ಮುರಳೀಧರ್, ತಂಬಾಕು ನಿಯಂತ್ರಣ ಮಂಡಳಿ ಘಟಕದ ಫಯಾಜ್, ನಳಿನ, ವಲಯ ಮೇಲ್ವಿಚಾರಕ ಶ್ರೀನಿವಾಸ್ ಸೇವಾ ಪ್ರತಿನಿಧಿ ಲತಾ ಇದ್ದರು.