ಹುಳಿಯಾರು: ಬ್ಯಾಂಕ್ಗಳಲ್ಲಿ ವ್ಯವಹರಿಸಲೆಂದು ಉಳಿತಾಯ ಖಾತೆ ತೆರೆದಿರುವ ಕೆಲವು ಗ್ರಾಹಕರು, ಖಾತೆಗಳಿಗೆ ಹಣ ಕಟ್ಟುವುದಾಗಲಿ ತೆಗೆಯುವುದಾಗಲಿ ಮಾಡದೇ ಇದ್ದಲ್ಲಿ ಆ ಉಳಿತಾಯ ಖಾತೆಯು ನಿಷ್ಕ್ರೀಯವಾಗುತ್ತದೆ. ಹಾಗಾಗಿ ಗ್ರಾಹಕರು ಕೆವೈಸಿ ದಾಖಲೆ ವಿವರಗಳನ್ನು ಬ್ಯಾಂಕಿಗೆ ಒದಗಿಸಿ ಖಾತೆಗಳನ್ನು ಸಕ್ರಿಯ ಮಾಡಿಕೊಳ್ಳಬಹುದು ಎಂದು ತುಮಕೂರು ಭಾರತೀಯ ಸ್ಟೇಟ್ ಬ್ಯಾಂಕ್ನ ಪ್ರಾದೇಶಿಕ ಕಚೇರಿಯ ಆರ್ಥಿಕ ಸೇರ್ಪಡೆ ವಿಭಾಗದ ವ್ಯವಸ್ಥಾಪಕಿ ದಿವ್ಯಾಶ್ರೀ ಸಲಹೆ ನೀಡಿದರು. ಹುಳಿಯಾರು ಹೋಬಳಿಯ ತಿಮ್ಲಾಪುರ ಚಂದ್ರಮೌಳೇಶ್ವರ ದೇವಸ್ಥಾನದ ಆವರಣದಲ್ಲಿ ಹುಳಿಯಾರಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ತಿಮ್ಲಾಪುರ ಗ್ರಾಪಂ ಮಟ್ಟದ ವಿನಾಯಕ ಸಂಜೀವಿನಿ ಒಕ್ಕೂಟದ ವತಿಯಿಂದಆಯೋಜಿಸಿದ್ದ ಜನ ಸುರಕ್ಷಾ ಶಿಬಿರ ಉದ್ಘಾಟಿಸಿ ಮಾತನಾಡಿದರು.ಚಿಕ್ಕನಾಯಕನಹಳ್ಳಿ ತಾಪಂ ಎನ್ಆರ್ಎಲ್ಎಂ ಒಕ್ಕೂಟದ ಮ್ಯಾನೇಜರ್ ಕಿಶೋರ್ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಗಳಾದ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ, ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ ಹಾಗೂ ಸಾಲ ಸೌಲಭ್ಯಗಳನ್ನು ಬ್ಯಾಂಕುಗಳ ಮೂಲಕ ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದರು. ವಿನಾಯಕ ಸಂಜೀವಿನಿ ಒಕ್ಕೂಟದ ಅಧ್ಯೆ ರಾಜಮ್ಮ, ಕಾರ್ಯದರ್ಶಿ ಸುಮಾ, ಖಜಾಂಚಿ ಕುಸುಮಾ, ಎಂ.ಬಿ.ಕೆ.ಪ್ರೇಮಾ, ಎಲ್ಸಿಆರ್ಪಿ ಗಳಾದ ಕವಿರತ್ನ, ಮಂಜುಳಾ, ದ್ರಾಕ್ಷಾಯಿಣಿ, ಪಶುಸಖಿ ನಾಗರತ್ನಾ, ಕೃಷಿ ಸಖಿ ಶೈಲಾ ಹಾಗೂ ಬಿಸಿ ಸಖಿ ಲತಾಮಣಿ ಇತರರು ಇದ್ದರು.