ಬೆಟ್ಟದಪುರ: ಯೋಗ ಎಂಬುದು ಪ್ರಾಚೀನ ಭಾರತೀಯ ಶಾಸ್ತ್ರೀಯ ವಿಧಾನವಾಗಿದೆ. ದೇಹ, ಮನಸ್ಸು ಮತ್ತು ಆತ್ಮದ ಸಮತೋಲನ ಸಾಧಿಸಲು ಸಹಾಯ ಮಾಡುವ ಅಭ್ಯಾಸವಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಯೋಗವನ್ನು ನಿರಂತರವಾಗಿ ಅಭ್ಯಾಸ ಮಾಡಬೇಕು ಎಂದು ಕೊಣಸೂರು ಆಯುಷ್ ಕೇಂದ್ರದ ಯೋಗ ತರಬೇತುದಾರರಾದ ಆಶಾ ಮಹದೇವರಾವ್ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಕೊಣಸೂರು ಗ್ರಾಮದ ಆಯುಷ್ ಕೇಂದ್ರದ ವತಿಯಿಂದ ಶನಿವಾರ ಶಾಲೆಯ ಆವರಣದಲ್ಲಿ ಆಯೋಜಿಸಿದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಯೋಗವು ದೇಹದ ಅರೋಗ್ಯದ ಜತೆಗೆ ಮಾನಸಿಕ ಅಧ್ಯಾತ್ಮಿಕ ಬೆಳವಣಿಗೆಗೆ ಸಹಕರಿಯಾಗಿದೆ ಎಂದರು.
ಕೊಣಸೂರು ಆಯುರ್ವೇದ ಆಸ್ಪತ್ರೆಯ ವೈದ್ಯ ಡಾ.ದಿನೇಶ್ ಮಾತನಾಡಿ, ಯೋಗವು ಕೇವಲ ದೈಹಿಕ ವ್ಯಾಯಾಮಕ್ಕೆಷ್ಟೇ ಸೀಮಿತವಾಗಿಲ್ಲ. ಇದು ಮನಸ್ಸು, ದೇಹ ಮತ್ತು ಚೈತನ್ಯವನ್ನು ಸಂಯೋಜಿಸುವ ಸಮಗ್ರ ಅಭ್ಯಾಸವನ್ನು ಒಳಗೊಂಡಿದೆ. ನಿಯಮಿತ ಯೋಗಾಭ್ಯಾಸವು ಮಾನಸಿಕ ಒತ್ತಡ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ. ಜತೆಗೆ ಮಾನಸಿಕ ಕೇಂದ್ರೀಕರಣಕ್ಕೆ ಸಹಕಾರಿ ಎಂದರು.
ಕಾರ್ಯಕ್ರಮದಲ್ಲಿ ಉತ್ತಮ ಆರೋಗ್ಯ ರಕ್ಷಣೆ ಮತ್ತು ದೀರ್ಘಕಾಲದ ರೋಗಮುಕ್ತ ಬದುಕಿಗಾಗಿ ಯೋಗಾಸನಗಳು, ಉಸಿರಾಟದ ತಂತ್ರಗಳು, ವ್ಯಾಯಾಮಗಳು ಮತ್ತು ಧ್ಯಾನವನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.
ಈ ಸಂದರ್ಭದಲ್ಲಿ ಭುವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪವಿತ್ರಾ, ಉಪಾಧ್ಯಕ್ಷೆ ಮಮತಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್, ತಾಲೂಕು ರೈತ ಸಂಘದ ಅಧ್ಯಕ್ಷ ಆನಂದ್, ಪ್ರೌಢಶಾಲೆಯ ಮುಖ್ಯಶಿಕ್ಷಕಿ ಸರೋಜಮ್ಮ, ಎಸ್‌ಡಿಎಂಸಿ ಸದಸ್ಯರಾದ ಪ್ರಭು, ಸತೀಶ್, ಕೆ.ಸಿ.ಸತೀಶ್, ಗ್ರಾಮದ ಮುಖಂಡರಾದ ವೀರಪ್ಪ, ರವಿ, ರಾಜಪ್ಪ, ಶಿವಣ್ಣ, ರಾಣಿ ಗ್ರಾಮಸ್ಥರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು.