ದೇವದುರ್ಗದ ಸಾರಿಗೆ ಸಂಸ್ಥೆ ಬಸ್ ಡಿಪೋದಲ್ಲಿ ಡೆಂಘೆ ಜಾಗೃತಿ ಕಾರ್ಯಕ್ರಮ ಜರುಗಿತು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಮ್ಮ, ತಾಲೂಕು ಮಲೇರಿಯಾ ಮೇಲ್ವಿಚಾರಕ ಓಂಕಾರ ಜಂತೇಕರ್, ಮಲೇರಿಯಾ ಲಿಂಕ್ ವರ್ಕರ್ ಸುದೀಪ್‌ಕುಮಾರ ಇದ್ದರು. 
ಜಿಲ್ಲೆ

ಸುತ್ತಲಿನ ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳಿ

ರುದ್ರಪ್ಪ ವಾಲಿ

ದೇವದುರ್ಗ: ಸಾರಿಗೆ ಸಂಸ್ಥೆ ನೌಕರರು ಕೆಲಸದ ಒತ್ತಡದ ನಡುವೆ ಆರೋಗ್ಯ ಕಾಳಜಿ ಮರೆಯುತ್ತಾರೆ. ಕೆಲಸದಷ್ಟೇ ಒತ್ತು ಆರೋಗ್ಯಕ್ಕೂ ನೀಡಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಮ್ಮ ಹೇಳಿದರು.

ಪಟ್ಟಣದ ಬಸ್ ಡಿಪೋದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಾರಿಗೆ ಸಂಸ್ಥೆಯಿಂದ ಆಯೋಜಿಸಿದ್ದ ಡೆಂಘೆ ಜಾಗೃತಿ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.

ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದ್ದು ಸ್ವಚ್ಛತೆಯಿಂದ ಸೊಳ್ಳೆಗಳ ನಿರ್ಮೂಲನೆ ಸಾಧ್ಯ. ಹೀಗಾಗಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಡೆಂಘೆ ಜ್ವರ ಈಡೀಸ್ ಸೋಕಿಂತ ಸೊಳ್ಳೆ ಕಚ್ಚುವಿಕೆಯಿಂದ ಬರುತ್ತದೆ. ಇದು ಸ್ವಚ್ಛವಾದ ನೀರಿನಲ್ಲಿ ಬೆಳೆದು ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತದೆ. ಮಳೆಗಾಲ ಪ್ರಾರಂಭವಾಗಿದ್ದರಿಂದ ಬಸ್ ಘಟಕ ವಿಭಾಗದಲ್ಲಿ ಟೈಯರ್‌ಗಳಲ್ಲಿ ಮಳೆ ನೀರು ನಿಂತು ಈಡೀಸ್ ಸೊಳ್ಳೆಗಳಿಂದ ಲಾರ್ವಗಳು ಉತ್ಪತ್ತಿಯಾಗುತ್ತವೆ.

ವ್ಯಕ್ತಿಗೆ ಸೊಳ್ಳೆ ಕಚ್ಚುವುದರಿಂದ ಡೆಂಘೆ ಜ್ವರ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಆದ್ದರಿಂದ ಮುಂಜಾಗ್ರತ ಕ್ರಮವಾಗಿ ಅನುಪಯುಕ್ತ ಟೈಯರ್‌ಳನ್ನು ವಿಲೇವಾರಿ ಮಾಡಬೇಕು ಎಂದರು.

ತಾಲೂಕು ಮಲೇರಿಯಾ ಮೇಲ್ವಿಚಾರಕ ಓಂಕಾರ ಜಂತೇಕರ್, ಮಲೇರಿಯಾ ಲಿಂಕ್ ವರ್ಕರ್ ಸುದೀಪ್‌ಕುಮಾರ, ಸಿಬ್ಬಂದಿ ರಮೇಶ ಇತರರಿದ್ದರು.