ಜಿಲ್ಲೆ

ಮೋಬೈಲ್‌ನಿಂದ ಮಕ್ಕಳು ದೂರವಿರಲಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಮನೆಯೇ ಮೊದಲ ಪಾಠಶಾಲೆ ಎಂಬುದು ಈಗ ಮೊಬೈಲ್ ಮೊದಲ ಪಾಠಶಾಲೆ ಎಂದು ಬದಲಾಗುತ್ತಿದೆ. ಇದು ಮಕ್ಕಳ ಭವಿಷ್ಯಕ್ಕೆ ಅಪಾಯಕಾರಿ ಎಂದು ಕೃಷಿ ವಿಶ್ವ ವಿದ್ಯಾಲಯದ ವಿಜ್ಞಾನಿ ಡಾ. ಭಾಗಿರತಿ ಪುಗಶೆಟ್ಟಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕೆಲಗೇರಿಯ ಕೆ.ಇ. ಬೋರ್ಡ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳನ್ನು ಮೊಬೈಲ್‌ನಿಂದ ದೂರ ಇಡುವ ಕೆಲಸ ತುರ್ತಾಗಿ ಆಗಬೇಕಿದೆ ಎಂದರು.
ಶಿಕ್ಷಕರು ಹಾಗೂ ಪಾಲಕರು ಮಕ್ಕಳ ಗುರಿ ಹೊತ್ತು ಸಾಗುವ ಚಕ್ಕಡಿಯ ಜೋಡೆತ್ತುಗಳಿದ್ದಂತೆ. ಮಕ್ಕಳು ನಿಮ್ಮನ್ನೇ ಅನುಕರಣೆ ಮಾಡಲಿದ್ದಾರೆ. ಹೀಗಾಗಿ ಶಿಕ್ಷಕರು, ಪಾಲಕರು ಮಾದರಿ ಆಗಿರಬೇಕು. ಭಾರತೀಯ ಸಂಸ್ಕೃತಿಯ ಪಾಲಕರು ನಾವಾಗಬೇಕು. ಶಿಕ್ಷಣದ ಜತೆಗೆ ವಿದ್ಯಾರ್ಥಿಗಳ ಆರೋಗ್ಯಕ್ಕೂ ಒತ್ತು ನೀಡಬೇಕು ಎಂದರು.
ಸಂಸ್ಥೆ ಅಧ್ಯಕ್ಷ ರಾಘವೇಂದ್ರ ಗುತ್ತಲ ಮಾತನಾಡಿ, ಮಕ್ಕಳು ಭವಿಷ್ಯ ಭಾರತದ ನಿರ್ಮಾತೃಗಳು. ಇವರಲ್ಲಿ ಉತ್ತಮ ಸಂಸ್ಕಾರ ಮೂಡಿಸುವ ಕೆಲಸವಾಗಬೇಕು. ಅತಿಯಾದ ಪ್ರೀತಿ, ಮೋಹ ಮಕ್ಕಳ ಮೇಲೆ ದುಷ್ಪರಿಣಾಮ ಬೀರಲಿದ್ದು, ಪಾಲಕರು ಹಾಗೂ ಶಿಕ್ಷಕರು ಪ್ರೀತಿಯೊಂದಿಗೆ ತಮ್ಮ ಜವಾಬ್ದಾರಿ ನಿರ್ವಹಿಸಬೇಕು ಎಂದರು.
ಪ್ರಾಚಾರ್ಯೆ ಪಲ್ಲವಿ ಆಕಳವಾಡಿ ವಾರ್ಷಿಕ ವರದಿ ವಾಚಿಸಿದರು. ಸಂಸ್ಥೆ ಕಾರ್ಯದರ್ಶಿ ಎಸ್.ಡಿ. ರಾಜಪುರೋಹಿತ, ಶೈಲಾ ಥಾಂಕರ, ಪ್ರೊ. ಹಳಿಯಾಳ, ಇತರರು ಇದ್ದರು.
ನಂತರ ಮಕ್ಕಳು ಪ್ರದರ್ಶಿಸಿದ ದೇಶಭಕ್ತಿ, ಜಾನಪದ ಹಾಗೂ ಚಿತ್ರಗೀತೆಗಳ ನೃತ್ಯ ಗಮನ ಸೆಳೆಯಿತು.