ಜಿಲ್ಲೆ

ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಕೆಇಎ ಚೆಲ್ಲಾಟ

ಎಂ.ರವಿ

ಕುಶಾಲನಗರ: ಇಂಜಿನಿಯರಿಂಗ್ ಮತ್ತು ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ವಿದ್ಯಾರ್ಥಿಗಳ ಕನಸಿಗೆ ಕೆಇಎ ತಣ್ಣೀರು ಎರಚಿದೆ. ಇತ್ತೀಚೆಗೆ ನಡೆದ ಸಿಇಟಿ ಪ್ರಶ್ನೆ ಪತ್ರಿಕೆಗಳಲ್ಲಿ ಓಟ್‌ಅಪ್ ಸಿಲಬಸ್‌ನಿಂದ ಆಯ್ದ ಹೆಚ್ಚಿನ ಪ್ರಶ್ನೆಗಳು ಕೊಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟ ಅಡಿದೆ ಎಂದು ಕರ್ನಾಟಕ ಅನುದಾನ ರಹಿತ ಕಾಲೇಜು ಆಡಳಿತ ಮಂಡಳಿಗಳ ಸಂಘದ ಕೊಡಗು ಜಿಲ್ಲಾ ಸಂಚಾಲಕ ಎನ್.ಎನ್.ಶಂಭುಲಿಂಗಪ್ಪ ಗಂಭೀರ ಆರೋಪ ಮಾಡಿದರು.

3 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಮುಗಿಸಿ ಸಿಇಟಿ ಪರೀಕ್ಷೆ ಬರೆದಿದ್ದಾರೆ. ಈ ವರ್ಷದ ಸಿಇಟಿ ಪ್ರವೇಶ ಪರೀಕ್ಷೆ ವಿದ್ಯಾರ್ಥಿಗಳ ಪಾಲಿಗೆ ಸ್ನೇಹಪರವಾಗಿ ಇರದೆ ದುಸ್ವಪ್ನವಾಗಿ ಕಾಡಿದೆ. ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಯಲ್ಲಿ ಪ್ರಶ್ನೆಪತ್ರಿಕೆ ನೋಡಿದ ತಕ್ಷಣ ಗೊಂದಲಕ್ಕೆ ಒಳಗಾಗಿದ್ದಾರೆ. ಇದಕ್ಕೆ ಪ್ರಮುಖ ಕಾರಣವಾಗಿರುವುದು ಕರ್ನಾಟಕ ಪರೀಕ್ಷಾ ಮಂಡಳಿ (ಕೆಇಎ) ಇದು ಎಲ್ಲರಿಗೂ ತಿಳಿದಿರುವ ವಿಚಾರ. ಹೊರಪಠ್ಯದಿಂದ ಹೆಚ್ಚು ಪ್ರಶ್ನೆಗಳು (ಔಟ್ ಆಫ್ ಸಿಲಬಸ್) ಬಂದಿರುವುದು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಅವರ ಕನಸು ಭಗ್ನವಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರತಿ ವರ್ಷ ಪರೀಕ್ಷೆ ನಡೆದಾಗ ಸಾಮಾನ್ಯವಾಗಿ ಒಂದಲ್ಲ ಒಂದು ವಿಷಯ ಕಠಿಣವಾಗಿರುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಕೆಇಎ ಇತಿಹಾಸದಲ್ಲಿ ಪ್ರಶ್ನೆಪತ್ರಿಕೆಯಲ್ಲಿ ಹೊರ ಪಠ್ಯದಿಂದ ಒಟ್ಟು 53 ಪ್ರಶ್ನೆಗಳನ್ನು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಹಾಗೂ ಗಣಿತ ನಾಲ್ಕು ವಿಷಯಗಳಲ್ಲಿ ಕೇಳಿರುವುದು, ಎಷ್ಟೋ ಕನಸುಗಳನ್ನು ಹೊತ್ತು ಪರೀಕ್ಷೆ ಬರೆಯಲು ಬಂದಂತ ವಿದ್ಯಾರ್ಥಿಗಳ ಗೊಂದಲಕ್ಕೆ ಕಾರಣವಾಯಿತು. ಹಾಗಾಗಿ ಮತ್ತೆ ಪರೀಕ್ಷೆ ನಡೆಸುವುದು ಸೂಕ್ತ. ಇಲ್ಲವೇ ಕೃಪಾಂಕ ನೀಡುವುದು ಉತ್ತಮ ಮಾರ್ಗವಾಗಬಹುದು. ಇದರಿಂದ ಎಷ್ಟೋ ಲಕ್ಷಾಂತರ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಯುತ್ತದೆ. ವಿದ್ಯಾರ್ಥಿಗಳಿಗೆ ನ್ಯಾಯ ದೊರಕಲಿ, ಎಲ್ಲ ಗೊಂದಲಗಳಿಗೆ ಆದಷ್ಟು ಶೀಘ್ರ ತೆರೆ ಬೀಳಲಿ ಎಂದು ಕರ್ನಾಟಕ ಅನುದಾನರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘದ, ಕೊಡಗು ಜಿಲ್ಲಾ ಸಂಚಾಲಕ ಎನ್.ಎನ್.ಶಂಭುಲಿಂಗಪ್ಪ, ಕಾಲೇಜು ವಿಜ್ಞಾನ ವಿಭಾಗ ಮುಖ್ಯಸ್ಥ ವಿಕ್ರಂ, ಪ್ರಾಂಶುಪಾಲೆ ಕ್ಲಾರಾ ರೇಷ್ಮಾ ಉಪನ್ಯಾಸಕರಾದ ಸೌಮ್ಯಾ, ನಮಿತಾ, ಸ್ವಾಮಿ ಇದ್ದರು.