ವಿಜಯವಾಣಿ ಸುದ್ದಿಜಾಲ ಧಾರವಾಡ
ಗುರುಕುಲ ಮಾದರಿಯ ಶಿಕ್ಷಣ ನೀಡುವ ಮೂಲಕ ಕೆ.ಇ. ಬೋರ್ಡ್ಸ್ ಶಾಲೆ ಶಿಕ್ಷಣ ಮತ್ತು ವಿದ್ಯಾರ್ಥಿ ಸಮೂಹದ ಭವಿಷ್ಯ ನಿರ್ಮಾಣದಲ್ಲಿ ಅಪಾರ ಕೊಡುಗೆ ನೀಡಿದೆ ಎಂದು ಶಾಸಕ ಸಿ.ಸಿ. ಪಾಟೀಲ ಅಭಿಪ್ರಾಯಪಟ್ಟರು.
ನಗರ ಮಾಳಮಡ್ಡಿ ಕೆ.ಇ. ಬೋರ್ಡ್ಸ್ ಪ್ರೌಢ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಹಳೇ ವಿದ್ಯಾರ್ಥಿಗಳ ಕೆಬೋಸಾ ಮಹಾಮೇಳದಲ್ಲಿ ಅವರು ಮಾತನಾಡಿದರು.
ಶಾಲೆಯ ಹಳೇ ವಿದ್ಯಾರ್ಥಿಯಾಗಿ ನನಗೆ ಅಪಾರ ಅಭಿಮಾನವಿದೆ. ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವುದು ಹೆಮ್ಮೆಯ ಸಂಗತಿ. ಮಕ್ಕಳ ಸರ್ವಾಂಗೀಣ ಬೆಳವಣಿಗೆ, ಸಂಸ್ಕಾರಯುತ ಬದುಕು ಕಲಿಸಿದ ಇಲ್ಲಿಯ ಗುರುಬಳಗದ ಸೇವೆ ನೆನಪು ಇಡುವಂತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಕಾರ್ಯಾಧ್ಯಕ್ಷ ಶ್ರೀಕಾಂತ ಪಾಟೀಲ ಮಾತನಾಡಿ, ಹಿರಿಯರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಶಾಲೆ ನಡೆದುಕೊಂಡು ಬಂದಿದೆ. ಹಳೇ ವಿದ್ಯಾರ್ಥಿಗಳ ಸಹಕಾರ ಪ್ರೋತ್ಸಾಹದಿಂದ ಶಾಲೆಯ ಪ್ರಗತಿ ಸಾಧ್ಯವಾಗಿದೆ. ದೇಶ ವಿದೇಶಗಳ ಉನ್ನತ ಕ್ಷೇತ್ರದಲ್ಲಿರುವ ಹಳೇ ವಿದ್ಯಾರ್ಥಿಗಳು ಭೇಟಿ ನೀಡಿ ಶಾಲೆ ಸಾಧಿಸುತ್ತಿರುವ ಪ್ರಗತಿಯ ಬಗ್ಗೆ ವಿಚಾರಿಸುತ್ತಿರುವುದು ಹೆಮ್ಮೆ ಪಡುವ ಸಂಗತಿಯಾಗಿದೆ ಎಂದರು.
ವಿಭಿನ್ನ ಕ್ಷೇತ್ರಗಳ ಸಾಧಕರಾದ ಶಾಸಕ ಅರವಿಂದ ಬೆಲ್ಲದ, ವಿಶ್ರಾಂತ ಕುಲಪತಿ ಡಾ. ಪ್ರಮೋದ ಗಾಯಿ, ಶಿಕ್ಷಣ ತಜ್ಞ ಎಸ್.ಎಂ. ಶಿವಪ್ರಸಾದ, ಅರುಣ ಬಳ್ಳಾರಿ, ರೋಶನ್‌ಸಿಂಗ್ ನವಲೂರ ಹಾಗೂ ಇತರ ಗಣ್ಯರು ವಿವಿಧ ಔದ್ಯೋಗಿಕ ಕ್ಷೇತ್ರಗಳ ಪರಿಚಯ ಮತ್ತು ಉದ್ಯೋಗಾವಕಾಶಗಳು, ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ತಂತ್ರಗಳು, ವ್ಯವಹಾರಿಕ ಜ್ಞಾನ ಮತ್ತು ಮೌಲ್ಯಶಿಕ್ಷಣದ ಕುರಿತ ಸಂವಾದ ನಡೆಸಿಕೊಟ್ಟರು.
ಹಳೇ ವಿದ್ಯಾರ್ಥಿಗಳಾದ, ಗಾಯಕರಾದ ಆನಂದ ಕುಲಕರ್ಣಿ, ಹಫೀಜ್ ಖಾನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಮಾಜಿ ಕಾರ್ಯಾಧ್ಯಕ್ಷ ಡಾ. ಆನಂದ ಕಬ್ಬೂರ, ಅರುಣ ನಾಡಿಗೇರ, ನಿಕಟ ಪೂರ್ವ ಅಧ್ಯಕ್ಷ ಕೆ.ಎಲ್. ಪಾಟೀಲ, ಕೆಬೋಸಾ ಖಜಾಂಚಿ ವಿಷ್ಣು ಹುಕ್ಕೇರಿ, ಪ್ರಾಂಶುಪಾಲ ಸುನೀತಾ ಕಡಪಟ್ಟಿ, ಉಪಪ್ರಾಂಶುಪಾಲ ಎನ್.ಎಸ್. ಗೋವಿಂದರಡ್ಡಿ, ರೋಹಿಣಿ ಚಿಲಮಿ, ಶಂಕರ ಶೇಖರಗೋಳ, ಸ್ಮಿತಾ ನೀಲಣ್ಣವರ, ಇತರರು ಇದ್ದರು.
ಕೆಬೋಸಾ ಅಧ್ಯಕ್ಷ ಅರುಣ ಬಳ್ಳಾರಿ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ಕೃಷ್ಣ ಕುಲಕರ್ಣಿ ಪ್ರಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಪಾಟೀಲ ನಿರೂಪಿಸಿದರು. ಡಿ.ಎಸ್. ರಾಜಪುರೋಹಿತ ವಂದಿಸಿದರು.