raichur 
ಜಿಲ್ಲೆ

ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ *ಶಿಕ್ಷಣ ಮಟ್ಟ ಉತ್ತಮವಾಗಿಸಲು ಡಿಸಿ,ಸಿಇಓರ ಜವಾಬ್ದಾರಿ- ಡಾ.ಶರಣ ಪ್ರಕಾಶ ಪಾಟೀಲ್

 ರಾಯಚೂರು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಈ ಬಾರಿ ಜಿಲ್ಲೆಯು ಉತ್ತಮ ಸ್ಥಾನ ಕಾಯ್ದುಕೊಳ್ಳುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಓ ಅವರು ತೆಗೆದುಕೊಂಡು ಕಾರ್ಯಪ್ರವೃತ್ತರಾಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಹೇಳಿದರು.

ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಜಿಲ್ಲೆಯು ಪ್ರತಿ ಬಾರಿ ಕೆಳಗಿನ ಸ್ಥಾನ ಪಡೆಯುವುದು ಆರೋಗ್ಯಕರ ಬೆಳವಣಿಗೆಯಲ್ಲ. ಕಳಪೆ ಫಲಿತಾಂಶ ಪಡೆಯುವುದು ಕಳಂಕದ ಸಂಗತಿಯಾಗಿದೆ. ಹೀಗಾಗಿ ವಿಶೇಷವಾಗಿ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಓ ಅವರು ಇದರ ಜವಾಬ್ದಾರಿ ಪಡೆದುಕೊಂಡು ಫಲಿತಾಂಶ ಸುಧಾರಣೆಗಾಗಿ ಸರ್ಕಾರಿ ಶಾಲೆಗಳಲ್ಲಿ ಏನು ಮಾಡಬಹುದು ಎಂಬುದರ ಬಗ್ಗೆ ಯೋಚಿಸಿ ಸುವ್ಯವಸ್ಥಿತ ಕಾರ್ಯದ ಯೋಜನೆ ರೂಪಿಸಿ ಕಾರ್ಯಶೀಲರಾಗಬೇಕು.

ಶಿಕ್ಷಣದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಮಹತ್ವದ ಹಂತಗಳಾಗಿವೆ. ಬಹಳಷ್ಟು ಮಕ್ಕಳಲ್ಲಿ ಪರೀಕ್ಷಾ ಭಯ ಇರುತ್ತದೆ. ಹಾಗಾಗಿ ಮೇಲಿಂದ ಮೇಲೆ ಕಿರು ಪರೀಕ್ಷೆ ಮತ್ತು ವಿಶೇಷ ತರಗತಿಗಳನ್ನು ನಡೆಸಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು. ಒಟ್ಟಾರೆ ಫಲಿತಾಂಶ ಸುಧಾರಣೆಗೆ ಶಾಲಾ ಶಿಕ್ಷಣ ಇಲಾಖೆ ಮತ್ತು ಪಿಯು ಶಿಕ್ಷಣ ಇಲಾಖೆಗಳು ಈಗಿಂದಲೇ ಸನ್ನದ್ದವಾಗಬೇಕು ಎಂದರು.

ಫಲಿತಾಂಶ ಕುಸಿಯಲು ಶಿಕ್ಷಕರ ಕೊರತೆ ಕಾರಣ ಎಂಬುದರಲ್ಲಿ ಹುರುಳಿಲ್ಲ. ನಮ್ಮಲ್ಲಿ ಶಿಕ್ಷಕರ ಕೊರತೆ ಇಲ್ಲ. ಶಾಲಾ ಕಾಲೇಜುಗಳಿಗೆ ನಿಯಮಿತ ಭೇಟಿ ನೀಡಿ, ಶಿಕ್ಷಕರ ಮತ್ತು ಮಕ್ಕಳ ಹಾಜರಾತಿ ಮತ್ತು ಕಲಿಕೆಯ ಗುಣಮಟ್ಟ ಪರಿಶೀಲಿಸದೇ ಮಾನಿಟರಿಂಗ್ ಮಾಡುವಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಿಂದೆ ಬಿದ್ದಿರುವುದೇ ಫಲಿತಾಂಶ ಕುಸಿಯಲು ಕಾರಣವಾಗಿದೆ. ಇದು ಸರಿಯಲ್ಲ ಎಂದು ಸಚಿವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಉತ್ತಮವಾದ ಪರಿಸರ ಸಿಗುವ ನಿಟ್ಟಿನಲ್ಲಿ ನಗರದಲ್ಲಿ ಪ್ರತಿ ವರ್ಷ ಹತ್ತು ಸಾವಿರ ಸಸಿ ನೆಟ್ಟು ಪೋಷಣೆ ಮಾಡಬೇಕು. ಎಲ್ಲ ತಾಲೂಕುಗಳಲ್ಲಿ ಸಹ ಗರಿಷ್ಟ ಮಟ್ಟದಲ್ಲಿ ಸಸಿ ನೆಡಲು ಕ್ರಮವಹಿಸಬೇಕು ಎಂದು ಸಚಿವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಎಂಎಲ್ಸಿ ಬಸನಗೌಡ ಬಾದರ್ಲಿ ಮಾತನಾಡಿ, ತಾಲೂಕಿನ ಬಹುತೇಕ ಶಾಲೆಗಳಿಗೆ ಶೌಚಾಲಯಗಳಿಲ್ಲ. ಬಹುತೇಕ ಶಾಲೆಗಳಲ್ಲಿ ಕಂಪ್ಯೂಟರ್ ತುಕ್ಕು ಹಿಡಿಯುತ್ತಿದ್ದು, ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಕಲಿಸುವವರು ಇಲ್ಲದಂತಾಗಿದೆಂದರು.

ಶಾಸಕ ಬಸನಗೌಡ ತುರ್ವಿಹಾಳ ಮಾತನಾಡಿ, ರೈತರಿಗೆ ರಸಗೊಬ್ವರ ಸರಿಯಾಗಿ ತಲುಪುತ್ತಿಲ್ಲ. ಯಾರಿಗೆ ಕೊಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ . ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಸಹಕಾರಿ ಸಂಘಗಳು ಮತ್ತು ಖಾಸಗಿ ಮಳಿಗೆಗಳಲ್ಲಿ ಗೊಬ್ಬರ ದಾಸ್ತಾನು ಇರುವ ಬಗ್ಗೆ ಪ್ರತಿದಿನ ಫಲಕದ ಮೂಲಕ ಮಾಹಿತಿ ನೀಡಬೇಕು. ಸರಿಯಾಗಿ ಮಾಹಿತಿ ನೀಡದ ಖಾಸಗಿ ಮಾರಾಟಗಾರರನ್ನು ಬ್ಲಾಕ್ ಲೀಸ್ಟಗೆ ಸೇರ್ಪಡೆ ಮಾಡಬೇಕು.

ಪ್ರಸಕ್ತ ಸಾಲಿನಲ್ಲಿ ಸಹ ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಗೊಬ್ಬರ ಪೂರೈಕೆ ಆಗಬೇಕು ಎಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ. ಕೃಷಿ ಅಧಿಕಾರಿಗಳು ಜಾಗೃತರಾಗಿ ಕೆಲಸ ಮಾಡಬೇಕು. ರಸಗೊಬ್ಬರದ ಕೊರತೆ ಇರುವ ಬಗ್ಗೆ ತಿಳಿಸಿದಲ್ಲಿ ತಾವು ಕೃಷಿ ಇಲಾಖೆಯ ಕಾರ್ಯದರ್ಶಿಗಳೊಂದಿಗೆ ಮಾತನಾಡುವುದಾಗಿ ಸಚಿವರು ಹೇಳಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಪ್ರಕಾಶ ಚೌಹಣ ಮಾತನಾಡಿ, ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ಶೇ.69ರಷ್ಟು ಹೆಚ್ಚಿನ ಮಳೆಯಾಗಿದೆ. ಜೂನ್ ಮತ್ತು ಜುಲೈನಲ್ಲಿ ಶೇ.32ರಷ್ಟು ಮಳೆ ಕೊರತೆಯಿಂದ ತೊಗರಿ ಮತ್ತು ಹತ್ತಿ ಬೆಳೆಗಳು ನಲುಗುತ್ತಿವೆ. ಜಿಲ್ಲೆಯಲ್ಲಿ 5.53 ಲಕ್ಷ ಹೆಕ್ಟೇರನಲ್ಲಿ ಬಿತ್ತನೆ ಗುರ್ಿ ಪೈಕಿ ಇದುವರೆಗೆ ಶೇ.48 ಹೇಕ್ಟೇರ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಇದುವರೆಗೆ 37 ರೈತ ಸಂಪರ್ಕ ಕೇಂದ್ರಗಳಿಂದ 4856.23 ಕ್ವಿಂಟಲ್ ನಷ್ಟುವ ಭತ್ತ, ತೊಗರಿ, ಸಜ್ಜೆ, ಹೆಸರು, ಮೆಕ್ಕೆಜೋಳ ಹಾಗೂ ಸೂರ್ಯಕಾಂತಿ ಬಿತ್ತನೆ ಬೀಜ ದಾಸ್ತಾನು ಮಾಡಿ ಇದುವರೆಗೆ ರಿಯಾಯಿತಿ ದರದಲ್ಲಿ 3245.21 ಕ್ವಿಂಟಲ್ ಬೀಜ ವಿತರಣೆ ಮಾಡಲಾಗಿದೆಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಎಂಎಲ್ಸಿ ಎ.ವಸಂತಕುಮಾರ, ಶರಣಗೌಡ ಪಾಟೀಲ ಬಯ್ಯಪುರ, ಪಾಮಯ್ಯ ಮುರಾರಿ, ಜಿಲ್ಲಾಧಿಕಾರಿ ನಿತೀಶ್ ಕೆ., ಎಸ್ಪಿ ಎಂ.ಪುಟ್ಟಮಾದಯ್ಯ,ಜಿಪಂ ಸಿಇಓ ಈಶ್ವರ ಕುಮಾರ ಕಾಂದೂ, ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ, ಅಪರ ಜಿಲ್ಲಾಧಿಕಾರಿ ಶಿವಾನಂದ ಸೇರಿ ಅನೇಕರು ಇದ್ದರು.