ಜಿಲ್ಲೆ

ಅಧಿಕಾರಿಗಳು ಜಡತ್ವ ಬಿಟ್ಟು ಕೆಲಸ ಮಾಡಬೇಕು

ಕೆಡಿಪಿ ಸಭೆಯಲ್ಲಿ ಶಾಸಕ ಧೀರಜ್ ಮುನಿರಾಜು ತಾಕೀತು

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಆರೋಗ್ಯ, ಶಿಕ್ಷಣ, ಮೂಲ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಜಡತ್ವ ಬಿಟ್ಟು ಕೆಲಸ ಮಾಡಬೇಕು ಎಂದು ಶಾಸಕ ಧೀರಜ್ ಮುನಿರಾಜು ತಾಕೀತು ಮಾಡಿದರು.
ತಾಪಂ ಸಭಾಂಗಣದಲ್ಲಿ ಗುರುವಾರ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮೂಲ ಸೌಕರ್ಯಗಳಿಗೆ ಕಳೆದ ಮೂರು ವರ್ಷದಲ್ಲಿ 3 ಕೋಟಿ ರೂ. ಬಿಡುಗಡೆಯಾಗಿದ್ದರೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಶಿಕ್ಷಣ, ಅಂಗನವಾಡಿ, ಆರೋಗ್ಯ, ಶೌಚಗೃಹ ಮತ್ತಿತರ ಅತ್ಯಗತ್ಯ ಕಾಮಗಾರಿಗಳಿಗೆ ಆದ್ಯತೆ ನೀಡಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ನಗರದ ಸರ್ಕಾರಿ ತಾಯಿ-ಮಗು ಆಸ್ಪತ್ರೆಗೆ ಗುಣಮಟ್ಟದ ಸೇವೆಗಾಗಿ ರಾಷ್ಟ್ರಪ್ರಶಸ್ತಿ ಬಂದಿರುವುದು ಶ್ಲಾಘನೀಯ. ಆದರೆ, ಸೇವೆಗೆ ತಕ್ಕ ನಿರ್ವಹಣೆ ಆಗುತ್ತಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ನಿತ್ಯ ನೂರಾರು ಜನ ಬರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುದ್ಧ ಕುಡಿಯುವ ನೀರಿಲ್ಲ. ಖಾಯಂ ವೈದ್ಯರಿರುವುದಿಲ್ಲ. ಆಸ್ಪತ್ರೆ ನಿರ್ವಹಣೆಯ ಗುತ್ತಿಗೆ ಪಡೆದವರು ಇದೆಲ್ಲವನ್ನೂ ಸಮರ್ಪಕವಾಗಿ ನಿಭಾಯಿಸಬೇಕು ಎಂದರು.
ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು
ಈ ಬಾರಿ ಮುಂಗಾರು ವಿಳಂಬವಾಗುವ ಸಾಧ್ಯತೆ ಇದ್ದು, 25,935 ಎಕರೆ ಕೃಷಿ ಬಿತ್ತನೆ ಪ್ರದೇಶವಿದೆ. ರಾಗಿ, ಮುಸುಕಿನ ಜೋಳ, ಅವರೆ, ತೊಗರಿ ಬೆಳೆಯಲಾಗುತ್ತ್ತದೆ. ಮುಂಗಾರು ಕೃಷಿ ಚಟುವಟಿಕೆಗೆ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಇರಿಸಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ರಾಜೇಶ್ವರಿ ಸಭೆಗೆ ತಿಳಿಸಿದರು.

ಪಡಿತರ ವಿತರಣೆಗೆ ತಯಾರಿ ತಾಲೂಕಿನಲ್ಲಿ 2.14 ಲಕ್ಷ ಜನಸಂಖ್ಯೆಗೆ ಜು.1 ರಿಂದ ತಲಾ 10 ಕೆ.ಜಿ. ಅಕ್ಕಿ ವಿತರಿಸಲಾಗುವುದು. ಪ್ರಸ್ತುತ ತಾಲೂಕಿನಲ್ಲಿ 85 ನ್ಯಾಯಬೆಲೆ ಅಂಗಡಿಗಳಿವೆ. ನಗರದಲ್ಲಿ 12, ಉಳಿದವು ಗ್ರಾಮಾಂತರ ಪ್ರದೇಶದಲ್ಲಿವೆ. 72 ಸಾವಿರ ಕಾರ್ಡ್‌ದಾರರಿಗೆ ಪಡಿತರ ವಿತರಣೆ ಮಾಡಲಾಗುವುದು ಎಂದು ಆಹಾರ ಇಲಾಖೆ ಶಿರಸ್ತೇದಾರ್ ಶಶಿಕಲಾ ಸಭೆಗೆ ತಿಳಿಸಿದರು. ಅಕ್ಕಿ ದಾಸ್ತಾನಿಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ನಮ್ಮಲ್ಲಿ ದಾಸ್ತಾನು ಮಾಡಲು ಸ್ಟೋರೇಜ್ ಕೆಪಾಸಿಟಿ ಇಲ್ಲ. ಸಮುದಾಯ ಭವನ, ಶಾಲೆಗಳನ್ನು ಬಳಸಿಕೊಳ್ಳಲಾಗುವುದು. ಸಹಕಾರ ಸಂಘಗಳನ್ನು
ಬಳಸಿಕೊಳ್ಳಲಾಗುವುದು ಎಂದರು.

ನೇಕಾರರಿಗೆ ವಾಣಿಜ್ಯ ಸಂಕೀರ್ಣ ಜವಳಿ ಇಲಾಖೆ ಜಿಲ್ಲಾ ನಿರ್ದೇಶಕಿ ಸೌಮ್ಯಾ ಮಾತನಾಡಿ, 18 ಸಾವಿರ ನೇಕಾರಿಕೆ ಕಾರ್ಮಿಕರ ಪೈಕಿ 13,012 ಜನರಿಗೆ ನೇಕಾರ ಸಮ್ಮಾನ್ ಯೋಜನೆಯ ಹಣ ಬಂದಿದೆ. ನಗರದ ಡಿ.ಕ್ರಾಸ್ ಸಮೀಪ ನೇಕಾರರ ಅನುಕೂಲಕ್ಕೆ ವಾಣಿಜ್ಯ ಮಳಿಗೆ ನಿರ್ಮಿಸಲು 10 ಗುಂಟೆ ಜಮೀನು ಮಂಜೂರಾಗಿದೆ. ಇದನ್ನು ರೇಷ್ಮೆ ಇಲಾಖೆಯಿಂದ ಜವಳಿ ಇಲಾಖೆಗೆ ಹಸ್ತಾಂತರ ಮಾಡಿದರೆ 9 ಕೋಟಿ ರೂ.ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಬಾರ್‌ಗಳಿಗೆ ನೊಟೀಸ್ ಜಾರಿ: ಚುನಾವಣೆ ನಂತರ ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟದ ದಂಧೆ ಮತ್ತೆ ಚಿಗುರೊಡೆದಿದ್ದು, ದೊಡ್ಡಬೆಳವಂಗಲ, ಸಾಸಲು ಹೋಬಳಿಯಲ್ಲಿ ಅಕ್ರಮ ಮದ್ಯ ಮಾರಾಟ ಮಿತಿ ಮೀರಿದೆ. ಹಾಗಾಗಿ ಬಾರ್‌ಗಳಿಗೆ ನೋಟಿಸ್ ಜಾರಿ ಮಾಡಿ ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಬೇಕಿದೆ ಎಂದು ಧೀರಜ್ ಮುನಿರಾಜು ಹೇಳಿದರು.