ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಗೆ ಕಳೆದ 4 ವರ್ಷದಲ್ಲಿ ಯಾವುದೇ ಯೋಜನೆಯಡಿ ಮನೆ ಮಂಜೂರಾಗಿಲ್ಲ. 2021-22ರಿಂದ ವಸತಿಗಾಗಿ ದ.ಕ. ಜಿಲ್ಲೆಯಿಂದ ಬೇಡಿಕೆಗಳೇ ಸಲ್ಲಿಕೆಯಾಗಿಲ್ಲ ಎನ್ನುವ ಅಂಶ ಶುಕ್ರವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಹಿರಂಗವಾಯಿತು. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಭೆಯ
ಅಧ್ಯಕ್ಷತೆ ವಹಿಸಿದ್ದರು.
ವಿಷಯ ಪ್ರಸ್ತಾಪಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ‘ ಬೆಂಗಳೂರಿನಲ್ಲಿ ಇತ್ತೀಚೆಗೆ ವಸತಿ ಸಚಿವರ ಜತೆ ಸಭೆ ನಡೆಸಿದಾಗ ದ.ಕ.ಜಿಲ್ಲೆಯ ಅಧಿಕಾರಿಗಳು 2021ರಿಂದ ವಸತಿಗಳಿಗೆ ಬೇಡಿಕೆ ಸಲ್ಲಿಸದೇ ಇರುವ ಅಂಶ ಗಮನಕ್ಕೆ ಬಂದಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಗೆ
ವಿವಿಧ ವಸತಿ ಯೋಜನೆಗಳಡಿ ಮನೆಗಳು ಮಂಜೂರಾಗಿದ್ದರೂ ದ.ಕ. ಜಿಲ್ಲೆಯ ವಸತಿ ಹಾಗೂ ನಿವೇಶನ ರಹಿತರು ಯೋಜನೆಗಳಿಂದ ವಂಚಿತರಾಗಿದ್ದಾರೆ ಎಂದರು.
ಅಧಿಕಾರಿಗಳ ಉತ್ತರಿಂದ ತೀವ್ರ ಅಸಮಾಧಾನಗೊಂಡ ಸಚಿವ ದಿನೇಶ್ ಗುಂಡೂರಾವ್ ‘ಬಡವರಿಗೆ ಮನೆ ಮಂಜೂರು ಮಾಡುವಲ್ಲಿ ಯಾವುದೇ ನಿರ್ಲಕ್ಷೃ ಸಲ್ಲದು. ನಾಲ್ಕು ವರ್ಷದಿಂದ ಒಂದೇ ಒಂದು ಮನೆ ಮಂಜೂರಾಗಿಲ್ಲ ಅಂದರೆ ಏನರ್ಥ ? ಎಂದು ಪ್ರಶ್ನಿಸಿದರು. ಸರ್ಕಾರಿ ಜಾಗ ಇದ್ದರೂ ಮನೆ ಕೊಡಲು ಸಾಧ್ಯವಾಗಿಲ್ಲ ಎಂದಾದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ಅವರಿಗೆ ಸೂಚನೆ ನೀಡಿದರು.
*ಪೂರ್ಣವಾಗದ ಮನೆಗಳು
2018ರಲ್ಲಿ ಮಾಡಿದ ಸರ್ವೇ ಪ್ರಕಾರ ಜಿಲ್ಲೆಯಲ್ಲಿ 49 ಸಾವಿರಕ್ಕೂ ಅಧಿಕ ವಸತಿ ರಹಿತರಿದ್ದರು ಎಂದು ಜಿಪಂ ಸಿಇಒ ಡಾ.ಆನಂದ್ ತಿಳಿಸಿದರು. 2010ರಿಂದ 2020ರವರೆಗೆ ಮಂಜೂರಾದ ಮನೆಗಳು ಈಗ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿವೆ.ಹತ್ತು ವರ್ಷಗಳಲ್ಲಿ ಒಟ್ಟು 64,123 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, 48,252 ಮನೆಗಳು ಪೂರ್ಣಗೊಂಡಿವೆ. 4,898 ಮನೆಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದ್ದು, 1,111 ಮನೆಗಳ ನಿರ್ಮಾಣ ಕಾರ್ಯ ಇನ್ನೂ ಆರಂಭ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಎಲ್ಲ ಮನೆಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಲು ಸಚಿವರು ಸೂಚಿಸಿದರು.
*ಕುಂಟುತ್ತಿರುವ ಜೆಜೆಎಂ ಯೋಜನೆ
ಗ್ರಾಮೀಣ ಪ್ರದೇಶದಲ್ಲಿ 24*7 ಕುಡಿಯುವ ನೀರಿನ ಪೂರೈಕೆಯ ಜಲಜೀವನ್ ಮಿಶನ್ (ಜೆಜೆಎಂ) ಎರಡು ವರ್ಷಗಳ ಹಿಂದೆ ಪೂರ್ಣಗೊಳ್ಳಬೇಕಾಗಿದ್ದರೂ ಇನ್ನೂ ಕಾಮಗಾರಿಯೇ ಪೂರ್ಣವಾಗಿಲ್ಲ. ಶೇ. 45ರಷ್ಟು ಮಾತ್ರ ಕಾಮಗಾರಿ ಪೂರ್ಣವಾಗಿದ್ದು, ಉಳಿದ ಕಾಮಗಾರಿಯನ್ನು 2025 ಮಾರ್ಚ್‌ನೊಳಗೆ ಮುಗಿಸುವುದಾದರೂ ಹೇಗೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಪ್ರಶ್ನಿಸಿದರು.
ಜೆಜೆಎಂ ಮಿಷನ್ ಯೋಜನೆಗೆ ಸಂಬಂಧಿಸಿ ಪಾಲನಾ ವರದಿಯ ಚರ್ಚೆ ವೇಳೆ ಕೆಡಿಪಿ ಸದಸ್ಯ ಮೆಲ್ವಿನ್ ಡಿಸೋಜಾ ಪ್ರತಿಕ್ರಿಯಿಸಿ, ಅಡ್ಯಾರು ನೀರುಮಾರ್ಗದಲ್ಲಿ ಓವರ್‌ಹೆಡ್ ಟ್ಯಾಂಕ್ ನಿರ್ಮಾಣವಾಗಿದೆ. ಒಂದು ವರ್ಷವಾದರೂ ನೀರು ತುಂಬಿಸಿ ಪೂರೈಕೆಯ ಬಗ್ಗೆ ಪರಿಶೀಲನೆ ಆಗಿಲ್ಲ ಎಂದರು.
* ಮಳೆಗಾಲದಲ್ಲೂ ನೀರಿಲ್ಲ
ಈಗಾಗಲೇ ಒದಗಿಸಿರುವ ಸಂಪರ್ಕಗಳಲ್ಲಿಯೂ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಪುತ್ತೂರು ಶಾಸಕ ಅಶೋಕ್‌ಕುಮಾರ್ ರೈ ದೂರಿದರು. ಬೆಳ್ತಂಗಡಿಯ ಬೆಳಾಲಿನಲ್ಲಿ ಟ್ಯಾಂಕ್ ನಿರ್ಮಿಸಿ ಬೋರ್‌ವೆಲ್ ಕೊರೆದು ಒಂದು ವರ್ಷವಾಗಿದೆ. ಆದರೆ ವಿದ್ಯುತ್ ಸಂಪರ್ಕ ನೀಡದ ಕಾರಣ ಮಳೆಗಾಲದಲ್ಲಿಯೂ ನೀರಿಲ್ಲದ ಪರಿಸ್ಥಿತಿ ಎಂದು ಕೆಡಿಪಿ ಸದಸ್ಯ ಸಂತೋಷ್ ಕುಮಾರ್ ಆಕ್ಷೇಪಿಸಿದರು. ಕಳಪೆ ಕಾಮಗಾರಿ ಬಗ್ಗೆ ಸಾಕಷ್ಟು ದೂರುಗಳಿವೆ .ನಗರದಲ್ಲಿ ಜಲಸಿರಿ ಯೋಜನೆಯ ಕಾಮಗಾರಿಯ ಮೇಲ್ವಿಚಾರಣೆಯನ್ನು ಪಾಲಿಕೆ ಆಯುಕ್ತರು ವಹಿಸಬೇಕು. ಜೆಜೆಎಂ ಯೋಜನೆಗೆ ಸಂಬಂಧಿಸಿ ಗುತ್ತಿಗೆದಾರರು, ಉಪ ಗುತ್ತಿಗೆದಾರರ ವಿಳಂಬದಿಂದ ಯೋಜನೆಗೆ ತೊಡಕಾಗುತ್ತಿದ್ದು, ನಷ್ಟವನ್ನು ಅವರಿಂದಲೇ ಭರಿಸುವ ಕ್ರಮ ವಹಿಸಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
*ತಡೆಗೋಡೆ ಕುಸಿತ ವರದಿಗೆ ಸೂಚನೆ
ಸ್ಮಾರ್ಟ್ ಸಿಟಿ ಯೋಜನೆಯಡಿ ನೇತ್ರಾವತಿ ಜಲಾಭಿಮುಖ ಕಾಮಗಾರಿ ತಡೆಗೋಡೆ ಕುಸಿದು ಬಿದ್ದಿರುವ ಬಗ್ಗೆ ಪ್ರಸ್ತಾಪಿಸಿದ ಎಂಎಲ್‌ಸಿ ಐವನ್ ಡಿಸೋಜಾ, ಇಷ್ಟೆಲ್ಲಾ ತಂತ್ರಜ್ಞಾನದ ಹೊರತಾಗಿಯೂ ಈ ರೀತಿಯ ಕಾಮಗಾರಿ ನಡೆದರೆ ಚುನಾಯಿತ ಪ್ರತಿನಿಧಿಗಳು ಜನರಿಗೆ ಉತ್ತರಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
2.1 ಕಿ.ಮೀ. ಉದ್ದದ ಯೋಜನೆಯಡಿ 740 ಮೀಟರ್‌ನ ತಡೆಗೋಡೆ ಮಾಡಲಾಗಿದ್ದು, ಅದರಲ್ಲಿ ಸರಿಯಾಗಿ ಮಣ್ಣು ತುಂಬಿಸಲು ಅವಕಾಶವಾಗದೆ 12 ಮೀಟರ್ ಉದ್ದದ ತಡೆಗೋಡೆ ಕುಸಿದಿದೆ. ಗುತ್ತಿಗೆದಾರರಿಂದ ಅದನ್ನು ಸರಿಪಡಿಸಲು ಸೂಚಿಸಲಾಗಿದೆ. ಈ ಯೋಜನೆಯ ಕುರಿತಂತೆ 2 ಪ್ರಕರಣ ಹಸಿರು ನ್ಯಾಯ ಪೀಠ(ಎನ್‌ಜಿಟಿ), 5 ಸಿವಿಲ್ ಪ್ರಕರಮಗಳು ಹಾಗೂ ಒಂದು ಹೈಕೋರ್ಟ್‌ನಲ್ಲಿ ಪ್ರಕರಮ ದಾಖಲಾಗಿ ಕಾಮಗಾರಿಗೆ ತಡೆಯಾಗಿದೆ. ಈ ತಡೆಯನ್ನು ತೆರವುಗೊಳಿಸಲು ಕ್ರಮವಹಿಸಲಾಗುತ್ತಿದೆ ಎಂದು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಅಧಿಕಾರಿಗಳು ಮಾಹಿತಿ ನೀಡಿದರು.
ಬಂದರು ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಾಟರ್ ಫ್ರಂಟ್ ಯೋಜನೆ ವಿಳಂಬವಾಗಿದೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹಾಗೂ ಶಾಸಕ ವೇದವ್ಯಾಸ ಕಾಮತ್ ಆಕ್ಷೇಪಿಸಿದರು. ತಡೆಗೋಡೆ ಕುಸಿತವಾದ ಬಗ್ಗೆ ತನಿಖೆ ನಡೆಸಿ ಒಂದು ವಾರದೊಳಗೆ ವರದಿ ನೀಡುವಂತೆ ಸಚಿವ ದಿನೇಶ್ ಗುಂಡೂರಾವ್ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
* ಕೃಷಿ ಸಾಲಕ್ಕೆ ಆದ್ಯತೆ
ಜಿಲ್ಲೆಯಲ್ಲಿ ರೈತರಿಗೆ ಜುಲೈ 31ರವರೆಗೆ ಬೆಳೆ ವಿಮೆ ಮಾಡಿಸಲು ಅವಕಾಶವಿದ್ದು, ಇದರ ಪ್ರಯೋಜನವನ್ನು ಪಡೆಯಬೇಕೆಂದು ರೈತರಿಗೆ ಮನವಿ ಮಾಡಿದ ಸಚಿವ ದಿನೇಶ್ ಗುಂಡೂರಾವ್, ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ರೂ.ವರೆಗಿನ ಕೃಷಿ ಸಾಲವನ್ನು ರೈತರಿಗೆ ವಿತರಿಸುವಲ್ಲಿ ಕೃಷಿ ಸಹಕಾರಿ ಬ್ಯಾಂಕ್‌ಗಳು ಸೂಕ್ತ ಕ್ರಮ ವಹಿಸುವಂತೆ ನಿರ್ದೇಶನ ನೀಡಿದರು.ಜಿಲ್ಲೆಯಲ್ಲಿ ಕಳೆದ ವರ್ಷ 1552 ರೈತರಿಗೆ ಒಟ್ಟು 72.95 ಕೋಟಿ ರೂ. ಕೃಷಿ ಸಾಲ ವಿತರಣೆಯಾಗಿದ್ದು, ಈ ವರ್ಷ ಎಪ್ರಿಲ್‌ನಿಂದ ಇದುವರೆಗೆ 67 ರೈತರಿಗೆ 3.51 ಕೋಟಿ ರೂ. ಸಾಲ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್, ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಯತೀಶ್,ಎಸಿಎಫ್ ಆ್ಯಂಟನಿ ಮರಿಯಪ್ಪ, ಮೆಸ್ಕಾಂನ ಎಂಡಿ ಡಿ.ಪದ್ಮಾವತಿ ಉಪಸ್ಥಿತರಿದ್ದರು.
...............