ಬೆಂಗಳೂರು ಗ್ರಾಮಾಂತರ: ನಮ್ಮ ಮನೆಯಲ್ಲಿ ಸೇರಿಕೊಂಡಿರುವ ಇಲಿ, ಚೇಳು ಹೊಡೆಯೋಕೆ ಪಕ್ಕದ ಮನೆಯವರ ಸಹಾಯ ಬೇಕಾ?...
ದೇವನಹಳ್ಳಿ ಜಿಪಂ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ರೇಷ್ಮೆ ಇಲಾಖೆ ಅಧಿಕಾರಿಗಳ ವಿರುದ್ಧ ಜಿಪಂ ಸಿಇಒ ರವಿಕುಮಾರ್ ಗುಡುಗಿದ್ದು ಹೀಗೆ.
ದೇವನಹಳ್ಳಿ ತಾಲೂಕು ಮಲ್ಲೇನಹಳ್ಳಿ ರೇಷ್ಮೆ ಕೃಷಿ ಕ್ಷೇತ್ರದಲ್ಲಿ ರೇಷ್ಮೆ ಇಲಾಖೆ ವಸತಿ ಗೃಹ ಆವರಣದಲ್ಲಿ ಸ್ಥಳೀಯರು ಒತ್ತುವರಿ ಮಾಡಿ ನಿರ್ಮಾಣ ಮಾಡಿರುವ ಶೆಡ್ ತೆರವು ವಿಷಯವಾಗಿ ಪ್ರತಿಕ್ರಿಯೆ ನೀಡಿದ ರೇಷ್ಮೆ ಇಲಾಖೆ ಅಧಿಕಾರಿಗಳ ಉತ್ತರಕ್ಕೆ ಸಿಇಒ ಗರಂ ಆದರು.
ಶೆಡ್ ತೆರವುಗೊಳಿಸುವಂತೆ ಕಳೆದ ಸಭೆಯಲ್ಲೇ ಸೂಚನೆ ನೀಡಿದ್ದರೂ ಏಕೆ ತಡ ಮಾಡುತ್ತಿದ್ದೀರಿ ಎಂದು ಜಿಪಂ ಅಧ್ಯಕ್ಷ ವಿ.ಪ್ರಸಾದ್ ಪ್ರಶ್ನಿಸಿದರು. ಶೆಡ್ ತೆರವಿಗೆ ಸೂಚಿಸಲಾಗಿದೆ. ಇನ್ನೊಂದು ತಿಂಗಳಲ್ಲಿ ಪೊಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಲಾಗುವುದು ಎಂದು ರೇಷ್ಮೆ ಇಲಾಖೆ ಅಧಿಕಾರಿಗಳು ತಿಳಿಸಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಸಿಇಒ, ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಇಷ್ಟೊಂದು ಕಾಲಾವಕಾಶ ಬೇಕೆ, ಇದಕ್ಕೆಲ್ಲಾ ಪೊಲೀಸರ ಸಹಕಾರ ಬೇಕಾ. ನಮ್ಮ ಮನೇಲಿರುವ ಇಲಿ, ಚೇಳುಗಳನ್ನು ಓಡಿಸಲು ಪಕ್ಕದ ಮನೆಯವರ ನೆರವು ಬೇಕಾ ಎಂದು ಹರಿಹಾಯ್ದರು. ಕೂಡಲೇ ಶೆಡ್ ತೆರವುಗೊಳಿಸಬೇಕು ಎಂದು ತಾಕೀತು ಮಾಡಿದರು.
ಒತ್ತುವರಿ ಆಗೋವರೆಗೆ ಏನು ಮಾಡ್ತಿರಾ?: ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡು ಶೆಡ್, ಕಟ್ಟಡ ನಿರ್ಮಾಣವಾಗುವವರೆಗೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುತ್ತೀರಲ್ಲ. ನಿಮಗೆ ಬದ್ಧತೆ ಇಲ್ಲವೆ ಅಥವಾ ಅಷ್ಟೊಂದು ನಿರ್ಲಕ್ಷ್ಯ ಏಕೆ ಎಂದು ಜಿಪಂ ಅಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳ ಉದಾಸೀನ ಧೋರಣೆಯಿಂದಲೇ ಇಂಥ ಒತ್ತುವರಿಗಳು ಸಾಮಾನ್ಯವಾಗಿವೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ ಇಂಥ ಸಂದರ್ಭಗಳೇ ಬರುವುದಿಲ್ಲ ಎಂದರು.
ಜಿಲ್ಲೆಯಲ್ಲಿ ಕರೊನಾ ಕಂಟ್ರೋಲ್: ಜಿಲ್ಲೆಯಲ್ಲಿ ಕರೊನಾ ಸೋಂಕು ತೀವ್ರ ಹತೋಟಿ ಬಂದಿದೆ. ಈಗಾಗಲೇ ಕರೊನಾ ಲಸಿಕೆ ನೀಡುತ್ತಿದ್ದು ಸೋಮವಾರದಿಂದ ಎರಡನೇ ಹಂತದ ನೋಂದಾಯಿತರಿಗೆ ಲಸಿಕೆ ನೀಡುವ ಕಾರ್ಯಕ್ರಮ ಶುರು ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುಳಾದೇವಿ ತಿಳಿಸಿದರು.
ಶೇ.100 ದಾಖಲಾತಿ ಮಾಡಿ: ಶಾಲೆಗಳು ಪುನರಾರಂಭಗೊಂಡಿದ್ದು, ಮುಂದಿನ ಸಾಲಿನಲ್ಲಿ ಶೇ.100 ದಾಖಲಾತಿ ಇರುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಜಿಪಂ ಅಧ್ಯಕ್ಷರು ಸೂಚಿಸಿದರು. ಡಿಡಿಪಿಐ ಗಂಗಮಾರೇಗೌಡ ಪ್ರತಿಕ್ರಿಯಿಸಿ, ಈಗಾಗಲೇ ಶೇ.90 ದಾಖಲಾತಿಯಾಗಿದೆ. ಹೊರಜಿಲ್ಲೆಗೆ ಹೋಗಿರುವ ಕೆಲವು ವಿದ್ಯಾರ್ಥಿಗಳು ಮರಳಿಲ್ಲ. ಅವರನ್ನು ಸಂಪರ್ಕಿಸಿ ದಾಖಲಾತಿಗೆ ಕ್ರಮಕೈಗೊಳ್ಳಲಾಗುತ್ತಿದೆ. ಕಳೆದ ಸಾಲಿಗೆ ಹೋಲಿಸಿದರೆ ಶೇ.11 ಹೆಚ್ಚು ದಾಖಲಾತಿ ನಿರೀಕ್ಷೆ ಇದೆ ಎಂದು ತಿಳಿಸಿದರು.
ದಾಖಲಾತಿ ಮಾಡಿಕೊಳ್ಳದಿದ್ದರೆ ಹೇಗೆ?: ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ಗಳಲ್ಲಿ ಹೊಸದಾಗಿ ದಾಖಲಾತಿ ಮಾಡಿಕೊಳ್ಳುತ್ತಿಲ್ಲ ಎಂಬ ದೂರು ವ್ಯಕ್ತವಾಗಿದೆ. ಈಗಾಗಲೇ ಕರೊನಾ ಕಾರಣದಿಂದ ಗ್ರಾಮೀಣ ಭಾಗಗಳಲ್ಲಿ ಬಸ್ ಸೌಕರ್ಯ ಸಮಸ್ಯೆ ಇದೆ. ಹಾಸ್ಟೆಲ್ಗಳಲ್ಲೂ ಅಡ್ಮಿಷನ್ ಇಲ್ಲ. ಅಂದರೆ ವಿದ್ಯಾರ್ಥಿಗಳ ಪಾಡೇನು ಎಂದು ಜಿಪಂ ಅಧ್ಯಕ್ಷ ವಿ.ಪ್ರಸಾದ್ ಅಧಿಕಾರಿಗಳನ್ನು ಪ್ರಶ್ನಿಸಿದರು. ಶೀಘ್ರವೇ ಪ್ರವೇಶಾತಿ ಶುರು ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಬ್ಲ್ಯಾಕ್ ಮಾಡೋದಷ್ಟೆ ಕೆಲಸನಾ?: ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಆಯ್ಕೆಯಾಗಿರುವ ಕೆಲವು ಫಲಾನುಭವಿಗಳ ಆಧಾರ್ ಕಾರ್ಡ್ ಟ್ಯಾಲಿ ಆಗದ ಹಿನ್ನೆಲೆಯಲ್ಲಿ ಅಂಥವುಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಮಾಹಿತಿಗೆ ಬೇಸರ ವ್ಯಕ್ತಪಡಿಸಿದ ಜಿಪಂ ಅಧ್ಯಕ್ಷರು, ಆಧಾರ್ ಟ್ಯಾಲಿ ಆಗದಿದ್ರೆ ಬ್ಲಾಕ್ ಮಾಡಿಬಿಡೊದಷ್ಟೆ ಕೆಲಸನಾ?, ಅದನ್ನು ಪರಾಮರ್ಶೆ ಮಾಡೋದು ಬೇಡವೇ?, ಅರ್ಹರಿದ್ದರೆ ಸರ್ಕಾರದ ಯೋಜನೆಯಿಂದ ವಂಚಿತವಾದಂತಾಗುವುದಿಲ್ಲವೇ?, ಈ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸಿ ವರದಿ ನೀಡಬೇಕು ಎಂದು ತಾಕೀತು ಮಾಡಿದರು.
ಗಿಡ ಕೊಡೋಕೂ ಕಷ್ಟನಾ?: ಅಂಗನವಾಡಿ ಆವರಣಗಳಲ್ಲಿ ಕೈತೋಟ ನಿರ್ಮಾಣಕ್ಕೆ ಸಸಿ ವಿತರಿಸಲು ವಿಳಂಬ ನೀತಿ ಅನುಸರಿಸುತ್ತಿರುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪ ಮಾಡಿದ ಅಧ್ಯಕ್ಷರು, ಗಿಡ ಕೊಡೋಕು ಇಲಾಖೆಗೆ ಕಷ್ಟವೇ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ದೇವನಹಳ್ಳಿ ತಾಲೂಕಿನ 50 ಅಂಗನವಾಡಿಗಳಿಗೆ 750 ಗಿಡ ನೀಡಲಾಗಿದೆ. ಉಳಿದ ತಾಲೂಕುಗಳಿಗೆ ವಾರದೊಳಗೆ ವಿತರಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಾಂತೇಶ್ ಮರಗೊಡು ತಿಳಿಸಿದರು.