ಕುಶಾಲನಗರ : ಕೊಡಗಿನ ಸೈನಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಗುರುವಾರ ಸಂಭ್ರಮದಿಂದ ಆಚರಿಸಲಾಯಿತು. ಜನರಲ್ ತಿಮ್ಮಯ್ಯ ಪೆರೇಡ್ ಮೈದಾನದಲ್ಲಿ ದ್ವಜಾರೋಹಣ ನೆರವೇರಿಸಿ ಮಾತನಾಡಿದ
ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್, ಭಾರತೀಯ ಸಶಸ್ತ್ರ ಪಡೆಗಳ ಶ್ರೇಷ್ಠತೆಯನ್ನು ಮತ್ತು ಶಾಲೆಯ ಮೂಲ ಧ್ಯೇಯವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ವಿದ್ಯಾರ್ಥಿಗಳನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಸದೃಢರನ್ನಾಗಿಸಿ, ಅವರ ಸಾಮಾಜಿಕ ಕೌಶಲ್ಯಗಳನ್ನು ಹೆಚ್ಚಿಸುವ, ಅದಮ್ಯ ದೇಶಭಕ್ತಿ ಮತ್ತು ರಾಷ್ಟ್ರೀಯ ಹೆಮ್ಮೆಯನ್ನು ತುಂಬುವ ಮೂಲಕ ಸಮಗ್ರ ಬೆಳವಣಿಗೆಗೆ ಶಾಲೆ ಶ್ರಮಿಸುತ್ತಿದೆ ಎಂದರು. ಇತ್ತೀಚೆಗೆ ನಡೆದ ಅಖಿಲ ಭಾರತ ಸೈನಿಕ ಶಾಲೆಗಳ ವಾರ್ಷಿಕ ಅಂತರ ಗುಂಪಿನ ಕ್ರೀಡಾಕೂಟದಲ್ಲಿ ಸಾಧನೆ ತೋರಿ ಶಾಲೆಗೆ ಪ್ರಶಸ್ತಿಗಳನ್ನು ತಂದ ವಿದ್ಯಾರ್ಥಿನಿಯರನ್ನು ಅಭಿನಂದಿಸಿದರು. ಶಾಲೆಗೆ ಸೇವೆ ಸಲ್ಲಿಸಿದ ಮಣಿಕಂದನ್, ರಸಾಯನ ಶಾಸ್ತ್ರ ಉಪನ್ಯಾಸಕ, ಕೆ.ಜನಾರ್ದನ ರಾವ್, ಲೋಕೇಶ ಅವರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು. ಪುಣೆಯ ಕೃತಕ ಅಂಗ ಕೇಂದ್ರಕ್ಕೆ ವರ್ಗಾವಣೆಗೊಂಡ ಶಾಲೆಯ ದೈಹಿಕ ಶಿಕ್ಷಣ ತರಬೇತುದಾರ ನಾಯಕ್ ಸುಬೇದಾರ್ ಎನ್. ವೆಂಕಟೇಶ ಅವರಿಗೆ ಸನ್ಮಾನಿಸಿ ಬೀಳ್ಕೊಡಲಾಯಿತು.