ಜಿಲ್ಲೆ

ಕೆಡಿಸಿಸಿ ಬ್ಯಾಂಕ್‌ ಚುನಾವಣೆ ನಾಳೆ

Uttara Kannada - Subash Hegde

ಶಿರಸಿ: ಕಳೆದ ಎರಡು ತಿಂಗಳಿಂದ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ನಿರ್ದೇಶಕ ಸ್ಥಾನಗಳಿಗೆ ಪೈಪೋಟಿ ಶನಿವಾರ ಅಂತ್ಯ ಕಾಣಲಿದೆ. 16 ಸ್ಥಾನಗಳ ಪೈಕಿ 13 ನಿರ್ದೇಶಕ ಸ್ಥಾನಗಳಿಗೆ ಶನಿವಾರ ಚುನಾವಣೆ ನಡೆಯಲಿದ್ದು, ಜಯಲಕ್ಷ್ಮೀ ಯಾರ ಕಡೆ, ಆಡಳಿತ ಚುಕ್ಕಾಣಿ ಯಾರ ಮಡಿಲಿಗೆ ಎಂಬ ಚಿತ್ರಣ ಹೊರಬರಲಿದೆ.

ಹೌದು, ಕೆಡಿಸಿಸಿ ಬ್ಯಾಂಕ್ ನ ಇತಿಹಾಸದಲ್ಲಿಯೇ ಈ ವರ್ಷದಷ್ಟು ಚುನಾವಣೆ ಕಾವು ಏರಿರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಬಣ ಒಂದೆಡೆಯಾದರೆ ಹಾಲಿ ಅಧ್ಯಕ್ಷ ಶಿವರಾಮ ಹೆಬ್ಬಾರ್ ಬಣ ಇನ್ನೊಂದೆಡೆ ತೊಡೆ ತಟ್ಟಿ ನಿಂತಿದೆ. ಈಗಾಗಲೇ ಹಲವು ನಾಟಕೀಯ ಬೆಳವಣಿಗೆಗಳ ಮೂಲಕ ಮೂರು ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದೆ. ಭಟ್ಕಳ ಕ್ಷೇತ್ರಕ್ಕೆ ಹಾಲಿ ನಿರ್ದೇಶಕ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವಿರೋಧ ಆಯ್ಕೆ ಮೂಲಕ ತಮ್ಮ ಸ್ಥಾನವನ್ನು ಮತ್ತೊಮ್ಮೆ ಭದ್ರಪಡಿಸಿಕೊಂಡಿದ್ದಾರೆ. ಅಂಕೋಲಾ ಸಹಕಾರಿ ಸಂಘಗಳ ಮತ ಕ್ಷೇತ್ರಕ್ಕೆ ಬೀರಣ್ಣ ಬೊಮ್ಮಯ್ಯ ನಾಯಕ, ಹಾಗೂ ಹೊನ್ನಾವರ ಸಹಕಾರಿ ಸಂಗಗಳ ಮತಕ್ಷೇತ್ರಕ್ಕೆ ವಿ.ಕೆ. ವಿಶಾಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನು 13 ನಿರ್ದೇಶಕ ಸ್ಥಾನಗಳಿಗೆ ಶನಿವಾರ ಮತದಾರರು ತಮ್ಮ ಹಕ್ಕು ಚಲಾಯಿಸಿ ಅಧಿಕಾರದ ಗದ್ದುಗೆಯನ್ನು ಹೆಬ್ಬಾರರಿಗೆ ನೀಡಬೇಕೋ, ಮಂಕಾಳ ವೈದ್ಯ ಅವರಿಗೆ ನೀಡಬೇಕೋ ಎಂದು ನಿರ್ಧಾರ ಮಾಡಲಿದ್ದಾರೆ. ಇದರಲ್ಲಿ ಸ್ಕೋಡ್ವೆಸ್ ಸಂಸ್ಥೆಯಿಂದ ಮಹಿಳಾ ಸ್ಪರ್ಧಿ ಸರಸ್ವತೀ ಎನ್. ರವಿ ಕಣದಲ್ಲಿರುವ ಏಕೈಕ ಮಹಿಳೆಯಾಗಿದ್ದಾರೆ.

ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಬಳಿಕ ಮತ ಎಣಿಕೆ ಪ್ರಕ್ರಿಯೆ ನಡೆದು ವಿಜೇತರನ್ನು ಘೋಷಿಸಲಾಗುತ್ತಿದೆ.

ನಿಷೇಧಾಜ್ಞೆ

ಕೆಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಬ್ಯಾಂಕ್‌ನಿAದ 100 ಮೀಟರ್ ಒಳಗಿನ ಪ್ರದೇಶದಲ್ಲಿ ನಿಷೇಧಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ. ಈ ಪ್ರದೇಶದಲ್ಲಿ ಯಾವುದೇ ಪ್ರಚಾರ ಕಾರ್ಯ, ಅಥವಾ ಮತದಾರರ ಓಲೈಕೆ ಮಾಡುವುದು, ಸನ್ನೆ ಮಾಡುವುದನ್ನು ನಿಷೇಧಿಸಲಾಗಿದೆ. ಯಾವುದೇ ರೀತಿಯಲ್ಲಿ ಬಹಿಷ್ಕಾ, ಘೋಷಣೆ ಕೂಗುವುದು ಅಥವಾ ಸಾರ್ವಜನಿಕ ಸಭ್ಯೆತೆ ಮೀರಿದ ವರ್ತನೆ ತೋರುವಂತಿಲ್ಲ. ಮತಗಟ್ಟೆಯ 100 ಮೀ. ಒಳಗೆ ಚುನಾವಣಾ ಸಿಬ್ಬಂದಿ ಹೊರತುಪಡಿಸಿ ಉಳಿದವರಿಗೆ ಮೊಬೈಲ್ ಬಳಕೆ ಮತ್ತು ಒಳಗೆ ತರುವಿಕೆಯನ್ನು ನಿಷೇಧಿಸಲಾಗಿದೆ. ಬ್ಯಾಂಕ್ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.