ಜಿಲ್ಲೆ

ಕೆಸಿಇಯು ರಾಜ್ಯ ಕೌನ್ಸಿಲ್ ಸಮಾವೇಶ

ಸೌಮ್ಯ ಆರ್

ಕಾಸರಗೋಡು: ಕೇರಳ ಸಹಕಾರಿ ನೌಕರರ ಸಂಘ (ಕೆಸಿಇಯು) ರಾಜ್ಯ ಕೌನ್ಸಿಲ್ ಸಭೆ ಶನಿವಾರ ಚೆರ್ಕಳದಲ್ಲಿ ನಡೆಯಿತು.

ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಳಮರ ಕರೀಂ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕೇರಳದಲ್ಲಿ ಸಹಕಾರ ಚಳವಳಿ ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು, ಒಕ್ಕೂಟಗಳು ದೇಶಕ್ಕೆ ಮಾದರಿಯಾಗಿದೆ. ಒಕ್ಕೂಟ ವ್ಯವಸ್ಥೆ ಉಲ್ಲಂಘಿಸಿ ಕೇಂದ್ರ ಸರ್ಕಾರ ಬಹುರಾಜ್ಯ ಸಹಕಾರಿ ಸಂಸ್ಥೆಗಳಿಗೆ ಉತ್ತೇಜನ ನೀಡುವ ಮೂಲಕ ಕೇರಳದ ಸಹಕಾರಿ ಕ್ಷೇತ್ರ ದಮನಿಸಲು ಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಹಕಾರಿ ಕ್ಷೇತ್ರದ ಭವಿಷ್ಯ ಭದ್ರಗೊಳಿಸಲು ಪರಿಷತ್ತು ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.

ಕೆಸಿಇಯು ರಾಜ್ಯಾಧ್ಯಕ್ಷೆ ಪಿ.ಎಂ.ವಹೀದಾ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಎನ್.ಕೆ.ರಾಮಚಂದ್ರನ್ ವರದಿ ಮಂಡಿಸಿದರು. 41,969 ಸದಸ್ಯಬಲ ಹೊಂದಿರುವ ರಾಜ್ಯ ಕೌನ್ಸಿಲ್ 298ಮಂದಿ ಚುನಾಯಿತ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಕೆಸಿಇಯು ರಾಜ್ಯ ಉಪಾಧ್ಯಕ್ಷೆ ಪಿ.ಜಾನಕಿ, ಸಂಘಟನಾ ಸಮಿತಿ ಉಪಾಧ್ಯಕ್ಷ ಟಿ.ಎಂ.ಎ.ಕರೀಂ, ಸಂಚಾಲಕ ಕೆ.ವಿ.ವಿಶ್ವನಾಥನ್, ಬಿ.ಮೋಹನನ್, ಕೆ.ವಿ.ರಮೇಶನ್ ಉಪಸ್ಥಿತರಿದ್ದರು.