ಜಿಲ್ಲೆ

ಕವಿವಿ ಅಂತರ ಕಾಲೇಜು ಅಥ್ಲೆಟಿಕ್ಸ್; ಕರ್ನಾಟಕ ಕಲಾ ಕಾಲೇಜು ಸಮಗ್ರ ಚಾಂಪಿಯನ್

ಮಂಜುನಾಥ ಅಂಗಡಿ

ಧಾರವಾಡ: ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಜರುಗಿದ ಕರ್ನಾಟಕ ವಿಶ್ವವಿದ್ಯಾಲಯದ 70ನೇ ಅಂತರ ಕಾಲೇಜುಗಳ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆತಿಥೇಯ ಕರ್ನಾಟಕ ಕಲಾ ಕಾಲೇಜು (ಕೆಸಿಡಿ) ತಂಡ ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ನಗರದ ಕರ್ನಾಟಕ ಕಾಲೇಜಿನ ಬಾಲಕ- ಬಾಲಕಿಯರು 12 ಚಿನ್ನ, 5 ಬೆಳ್ಳಿ, 4 ಕಂಚು ಸೇರಿ 21 ಪದಕಗಳೊಂದಿಗೆ ಸಮಗ್ರ ಚಾಂಪಿಯನ್ ಪ್ರಶಸ್ತಿಗೆ ಭಾಜನರಾದರು.
ಧಾರವಾಡದ ವಿದ್ಯಾಗಿರಿ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ 8 ಚಿನ್ನ, 6 ಬೆಳ್ಳಿ ಸೇರಿ 14 ಪದಕಗಳೊಂದಿಗೆ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದರೆ, ಉತ್ತರ ಕನ್ನಡ ಜಿಲ್ಲೆ ಮಂಕಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 4 ಚಿನ್ನ, 1 ಕಂಚು ಸೇರಿ 5 ಪದಕಗಳೊಂದಿಗೆ ದ್ವಿತೀಯ ರನ್ನರ್ ಅಪ್ ಸ್ಥಾನ ಪಡೆದುಕೊಂಡಿತು.
* 6 ನೂತನ ದಾಖಲೆ:
ಕ್ರೀಡಾಕೂಟದಲ್ಲಿ ಪುರುಷ ಮತ್ತು ಮಹಿಳೆಯರು ಸೇರಿ 6 ನೂತನ ದಾಖಲೆ ನಿರ್ಮಿಸಿದರು. ಕರ್ನಾಟಕ ಕಾಲೇಜಿನ ನಾಗರಾಜ ದಿವಟೆ, ಜೆಎಸ್‌ಎಸ್ ಕಾಲೇಜಿನ ಕ್ರೀಡಾಪಟುಗಳಾದ ನಯನಾ ಕೋಕರೆ (2 ದಾಖಲೆ) ಸುಭಾಷ ಡಿ., ಶ್ರಾವ್ಯ ಮತ್ತು ಅನನ್ಯಾ ಪೂಜಾರಿ ನೂತನ ದಾಖಲೆದರು.
* ಅತ್ಯುತ್ತಮ ಕ್ರೀಡಾಪಟುಗಳು:
ಕ್ರೀಡಾಕೂಟದಲ್ಲಿ ನೂತನ ದಾಖಲೆ ನಿರ್ಮಿಸಿದ ಕರ್ನಾಟಕ ಕಲಾ ಕಾಲೇಜಿನ ನಾಗರಾಜ ದಿವಟೆ ಮತ್ತು ಜೆಎಸ್‌ಎಸ್ ಕಾಲೇಜಿನ ನಯನಾ ಕೋಕರೆ ಅತ್ಯುತ್ತಮ ಅಥ್ಲೀಟ್‌ಗಳಾಗಿ ಹೊರಹೊಮ್ಮಿದರು.