ಜಿಲ್ಲೆ

ವಿಮಾನ ನಿಲ್ದಾಣ ಪ್ರಾಧಿಕಾರದೊಂದಿಗೆ ಕೆಸಿಡಿ ಒಪ್ಪಂದ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕರ್ನಾಟಕ ಕಲಾ ಕಾಲೇಜಿನ (ಕೆಸಿಡಿ) ಸ್ನಾತಕ, ಸ್ನಾತಕೋತ್ತರ ಪ್ರವಾಸೋದ್ಯಮ ಅಧ್ಯಯನ ವಿಭಾಗವು ವಿಮಾನ ನಿಲ್ದಾಣಗಳ ಪ್ರಾಧಿಕಾರ (ಚನ್ನೈ ವೃತ್ತ)ದೊಂದಿಗೆ ಶೈಕ್ಷಣಿಕ ಚಟುವಟಿಕೆಗಳಿಗೆ ಸಹಾಯಕವಾಗಲು ಮತ್ತು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಹುಬ್ಬಳ್ಳಿಯ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಜತೆಗೆ ಇತ್ತೀಚೆಗೆ ಒಪ್ಪಂದ ಮಾಡಿಕೊಂಡಿದೆ.
ಒಪ್ಪಂದವು ವಿದ್ಯಾರ್ಥಿಗಳಿಗೆ 4 ರಿಂದ 20 ವಾರಗಳ ವೃತ್ತಿ ತರಬೇತಿ, ವಿಇಲ್ಲಿನ ಔದ್ಯೋಗಿಕ ವಾತಾವಾರಣದ ಜ್ಞಾನ ಮತ್ತು ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ. ಒಪ್ಪಂದ 5 ವರ್ಷಗಳವರೆಗೆ ಒಳಪಟ್ಟಿದೆ ಎಂದು ಪ್ರವಾಸೋದ್ಯಮ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಜಗದೀಶ ಕಿವುಡನವರ ಹೇಳಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶ ಕುಮಾರ ಮಾತನಾಡಿ, ಪ್ರವಾಸೋದ್ಯಮವನ್ನು ಓದಿದ ಮತ್ತು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿಮಾನಯಾನ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗ ಅವಕಾಶಗಳಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಹುಬ್ಬಳ್ಳಿಯ ಭಾರತ ವಿಮಾನ ನಿಲ್ದಾಣ ಪ್ರಾಧಿಕಾರದ ವ್ಯವಸ್ಥಾಪಕ ಪ್ರತಾಪ್​ ಮಾತನಾಡಿ, ಕರ್ನಾಟಕ ಕಾಲೇಜಿನೊಂದಿಗೆ ಒಪ್ಪಂದ ಮಾಡಿಕೊಂಡಿರುವುದು ಸಂತಸ ತಂದಿದೆ. ಕಡಿಮೆ ಶುಲ್ಕದಲ್ಲಿ ಪ್ರವಾಸೋದ್ಯಮ ಪದವಿ ಮತ್ತು ಸ್ನಾತಕೋತ್ತರ ಪದವಿ ಹಾಗೂ ಹೋಟೆಲ್​ ಪದವಿ ಪೂರೈಸಿದವರು ಈಗಾಗಲೇ ಇಲ್ಲಿ ಉದ್ಯೋಗ ಪಡೆದಿದ್ದಾರೆ. ಇಂತಹ ಅವಕಾಶಗಳು ಅಪರೂಪ. ಅಧ್ಯಾಪಕರು ಈ ನಿಟ್ಟಿನಲ್ಲಿ ಮಕ್ಕಳಿಗೆ ಉದ್ಯೋಗವಕಾಶ ಕಲ್ಪಿಸಿಕೊಡಲು ಕಾರ್ಯನಿರ್ವಹಿಸುತ್ತಿರುವುದು ಶ್ಲಾನೀಯ ಎಂದರು.
ಅಧ್ಯಾಪಕಿ ಡಾ. ಸುಷ್ಮಾ ಮಳಿಗಿ, ವಿಮಾನ ನಿಲ್ದಾಣದ ಸಿಬ್ಬಂದಿ, ಇತರರು ಇದ್ದರು.