ಜಿಲ್ಲೆ

ಕೆಸಿಸಿಐನಿಂದ ಸಂಸ್ಥಾಪಕರ ದಿನಾಚರಣೆ,  ಆರು ಸಾಧಕರಿಗೆ ವಾಣಿಜ್ಯ ರತ್ನ ಪ್ರಶಸ್ತಿ ಪ್ರದಾನ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ (ಕೆಸಿಸಿಐ) ಸಂಸ್ಥಾಪಕರ ದಿನವನ್ನು ಆಗಸ್ಟ್ 2ರಂದು ಸಂಜೆ 4.30ಕ್ಕೆ ನಗರದ ಎಪಿಎಂಸಿ ಬಳಿಯ ಹುಬ್ಬಳ್ಳಿ ಧಾರವಾಡ ವಿವಿಧೋದ್ದೇಶ ವಸ್ತು ಪ್ರದರ್ಶನ ಕೇಂದ್ರದಲ್ಲಿ ಏರ್ಪಡಿಸಲಾಗಿದೆ ಎಂದು ಕೆಸಿಸಿಐ ಅಧ್ಯಕ್ಷ ಎಸ್.ಪಿ. ಸಂಶಿಮಠ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೋರಣಗಲ್ಲಿನ ಜತೆ ಎಸ್ ಡಬ್ಲೂ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪಾರ್ಥ ಜಿಂದಾಲ್ ಅತಿಥಿಗಳಾಗಿ ಪಾಲ್ಗೊಳ್ಳುವರು. ಆರು ಜನ ಸಾಧಕ ವರ್ತಕರು, ಉದ್ಯಮಿಗಳಿಗೆ ವಾಣಿಜ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ವಿವಿಧ ಕ್ಷೇತ್ರದ ಗಣ್ಯರು, ಸಾರ್ವಜನಿಕರು ಭಾಗವಹಿಸುವರು ಎಂದರು.

ಸಂಸ್ಥಾಪಕರ ದಿನಾಚರಣೆ ಸಮಿತಿ ಚೇರ್ಮನ್ ಪ್ರಕಾಶ ಲಿಂಬಯ್ಯಸ್ವಾಮಿಮಠ ಮಾತನಾಡಿ, ಬೆಳಗಾವಿಯ ಅಶೋಕ ಐರನ್ ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ನ ಜಯಂತ ಹುಂಬರವಾಡಿ, ಹುಬ್ಬಳ್ಳಿಯ ರಾಜಧಾನಿ ಮೋಟರ್ಸನ ಪ್ರಕಾಶ ಬಾಫಣಾ, ಕಲಬುರ್ಗಿಯ ಮಹಾಲಕ್ಷ್ಮಿ ಡಿಸ್ಟ್ರಿಬ್ಯೂಟರ್ಸನ ರವೀಂದ್ರಕುಮಾರ ಬೆಕನಾಳ, ಗದಗನ ವಿಜಯನಿಧಿ ಆಗ್ರೋ ಇಂಡಸ್ಟ್ರೀಸ್‌ ನ ಶರಣಬಸಪ್ಪ ಗುಡಿಮನಿ ಹಾಗೂ ಕೊಪ್ಪಳದ ಈಶ್ವರ ಟ್ರೇಡರ್ಸನ ಸಿದ್ದಣ್ಣ ನಾಲವಾಡ ಹಾಗೂ ಮಹಿಳಾ ಉದ್ಯಮಿ ದೇವಿ ಸಿಲ್ಕ್ ಕಾರ್ಪೊರೇಶನ್ ನ ದೇವಕಿ ಯೋಗಾನಂದ ಅವರಿಗೆ ವಾಣಿಜ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.

ವ್ಯಾಪಾರಸ್ಥರು, ಉದ್ಯಮಿಗಳ ಹಿತಾಸಕ್ತಿ ಕಾಪಾಡುವ ದಿಸೆಯಲ್ಲಿ ಬಾಗಲಕೋಟೆಯಲ್ಲಿ 1928ರ ಆಗಸ್ಟ್ 1ರಂದು ಶ್ರೀ ಮುರಗಯ್ಯಸ್ವಾಮಿ ಜಂಗಿನ ಅವರ ನೇತೃತ್ವದಲ್ಲಿ ಕರ್ನಾಟಕ ವಣಿಕ್ ಸಂಘ ಆರಂಭವಾಯಿತು. ಅವರ ಜತೆಗೆ ನಾಗಪ್ಪಣ್ಣ ಅಬ್ದುಲ್ಪುರಕರ್ ಹಾಗೂ ಶ್ರೀನಿವಾಸರಾವ್ ಮಂಗಳವೇಢೆ ಅವರು ಕೈಜೋಡಿಸಿ ಸಹಕರಿಸಿದರು.

ಇವರ ನಾಯಕತ್ವಕ್ಕೆ ಸ್ಪಂದಿಸಿದ ಅನೇಕ ವ್ಯಾಪಾರಸ್ಥರು, ಉದ್ಯಮಿಗಳು ಒಗ್ಗಟ್ಟಿನಿಂದ ಕೈಜೋಡಿಸಿ ಕನ್ನಡ ನಾಡಿನ ವಾಣಿಜ್ಯೋದ್ಯಮ ಪರಂಪರೆಯಲ್ಲಿ ನೂತನ ಅಧ್ಯಾಯ ಬರೆಯುವ ಕಾರ್ಯಕ್ಕೆ ಚಾಲನೆ ನೀಡಿದರು.

ಸಂಸ್ಥೆ ಬೆಳೆದಂತೆ ಗದಗ, ನಂತರ 1947ರಲ್ಲಿ ಹುಬ್ಬಳ್ಳಿಗೆ ಸ್ಥಳಾಂತರಗೊಂಡಿತು. ಆರಂಭದಲ್ಲಿದ್ದ ವಣಿಕ್ ಸಂಘವು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಾಗಿ ರಾಜ್ಯವ್ಯಾಪಿ ತನ್ನ ಸದಸ್ಯತ್ವವನ್ನು ವಿಸ್ತರಿಸಿದೆ. ಉತ್ತರ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ತನ್ನದೇ ಆದ ರೀತಿಯಲ್ಲಿ ಪ್ರಯತ್ನ, ಹೋರಾಟಗಳನ್ನು ನಡೆಸುತ್ತಿದೆ ಎಂದರು.

ಪ್ರದರ್ಶನ ಕೇಂದ್ರ ಸಕ್ರಿಯ:
ಎಪಿಎಂಸಿ ಬಳಿಯ ವಸ್ತು ಪ್ರದರ್ಶನ ಕೇಂದ್ರವನ್ನು ಸದಾ ಚಟುವಟಿಕೆಯಿಂದ ಇಡಲು ಕೆಸಿಸಿಐ ಸರ್ವ ಪ್ರಯತ್ನಗಳನ್ನು ಮಾಡುತ್ತಿದೆ. ಸರ್ಕಾರದಿಂದ ಇನ್ನಷ್ಟು ನೆರವು ಬಂದರೆ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಕಂಪ್ಯೂಟರ್ ತರಬೇತಿ, ಉಪನ್ಯಾಸ, ಕಾರ್ಯಾಗಾರ ಸೇರಿ ವಿವಿಧ ಕಾರ್ಯಕ್ರಮ ನಡೆಸಲಾಗುವುದು. ಸಾಂಸ್ಕೃತಿಕ ಭವನ ನಿರ್ಮಿಸಿ ಇನ್ನಷ್ಟು ಸಂಸ್ಕೃತಿ, ಸಾಮಾಜಿಕ ಚಟುವಟಿಕೆ ನಡೆಸಲು ಅವಕಾಶ ಮಾಡಿಕೊಡಲಾಗುವುದು ಎಂದರು.

ಈ ಭಾಗಕ್ಕೆ ಎಫ್ಎಂಸಿಜಿ, ಏರೋಸ್ಪೇಸ್ ತರಲು ಸರ್ವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಪದಾಧಿಕಾರಿಗಳು ತಿಳಿಸಿದರು.

ಕೆಸಿಸಿಐ ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ, ಉಪಾಧ್ಯಕ್ಷರಾದ ಸಂದೀಪ ಬಿಡಸಾರಿಯಾ, ಪ್ರವಿಣ ಅಗಡಿ, ಜೊತೆ ಗೌರವ ಕಾರ್ಯದರ್ಶಿ ಮಹೇಂದ್ರ ಸಿಂಘಿ ಇತರರು ಗೋಷ್ಠಿಯಲ್ಲಿದ್ದರು.