ಜಿಲ್ಲೆ

ಕೆಸಿಸಿ ಬ್ಯಾಂಕ್ ಅನುತ್ಪಾದಕ ಆಸ್ತಿ ಮಾರಾಟಕ್ಕೆ ವಿರೋಧ

ಸವಣೂರ: ನಬಾರ್ಡ್ ಪರಿವೀಕ್ಷಣೆ ವರದಿ ಹಾಗೂ ರಿಸರ್ವ್ ಬ್ಯಾಂಕ್ ಒತ್ತಡದ ನಿರ್ದೇಶನದ ಮೇರೆಗೆ ಧಾರವಾಡ ಕೆಸಿಸಿ ಬ್ಯಾಂಕ್ ವ್ಯಾಪ್ತಿಗೊಳಪಡುವ ಸವಣೂರ ಪಟ್ಟಣದ ಕೆಸಿಸಿ ಬ್ಯಾಂಕಿನ ಅನುತ್ಪಾದಕ ಸ್ಥಿರಾಸ್ತಿ ಮಾರಾಟ ಮಾಡುತ್ತಿರುವುದನ್ನು ಸ್ಥಗಿತಗೊಳಿಸಿ, ಆಸ್ತಿಯನ್ನು ಕೆಸಿಸಿ ಬ್ಯಾಂಕಿಗೆ ಉಳಿಸಿಕೊಡಬೇಕು ಎಂದು ಧಾರವಾಡ ಕೆಸಿಸಿ ಬ್ಯಾಂಕ್ ನಿರ್ದೇಶಕ ಸುಭಾಸ ಗಡೆಪ್ಪನವರ ತಾಲೂಕಿನ ಎಲ್ಲ ಸಹಕಾರಿ ಧುರೀಣರ ಪರ ಆಗ್ರಹಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೆಸಿಸಿ ಬ್ಯಾಂಕಿನ ಅನುತ್ಪಾದಕ ಆಸ್ತಿ ಮಾರಾಟ ಪ್ರಕ್ರಿಯೆ ಖಂಡಿಸಿ ತಾಲೂಕಿನ ಸಹಕಾರಿ ಧುರೀಣರು ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕೆಸಿಸಿ ಬ್ಯಾಂಕಿನ ಆಸ್ತಿಯು (ಸುಮಾರು 1 ಎಕರೆಗೂ ಹೆಚ್ಚು) ಪಟ್ಟಣದ ಪ್ರಮುಖ ಪ್ರದೇಶದಲ್ಲಿದೆ. ಹಾವೇರಿ ಜಿಲ್ಲೆಯಲ್ಲಿ ಕೆಸಿಸಿ ಬ್ಯಾಂಕಿಗೆ ಒಳಪಟ್ಟ ವಿಶಾಲವಾದ ಸ್ಥಿರಾಸ್ತಿ ಇಲ್ಲದಿರುವ ಕಾರಣ ಈ ಆಸ್ತಿಯನ್ನು ಉಳಿಸಿಕೊಂಡು ಕೆಸಿಸಿ ಬ್ಯಾಂಕಿನ ತರಬೇತಿ ಕೇಂದ್ರ ತೆರೆಯಬೇಕು ಎಂಬುದು ಎಲ್ಲ ಸಹಕಾರಿ ಧುರೀಣರ ಒತ್ತಾಸೆಯಾಗಿದೆ ಎಂದರು.

ಪ್ರತಿ ವರ್ಷ ಕೆಸಿಸಿ ಬ್ಯಾಂಕಿನ ಅಧ್ಯಕ್ಷರು, ಸದಸ್ಯರು, ಕಾರ್ಯದರ್ಶಿಗಳು ಹಾಗೂ ನೌಕರರು ತರಬೇತಿ ಪಡೆಯಲು ಬೇರೆ ಜಿಲ್ಲೆಗಳಿಗೆ ಹೋಗಬೇಕಿದೆ. ಆದ್ದರಿಂದ, ಈ ಸ್ಥಳವು ಮದ್ಯವರ್ತಿ ಕೇಂದ್ರವಾಗಿರುವುದರಿಂದ, ಬ್ಯಾಂಕಿನ ಆಸ್ತಿ ಉಳಿಸಿಕೊಂಡು, ಇಲ್ಲಿಯೇ ತರಬೇತಿ ಕೇಂದ್ರ ಸ್ಥಾಪಿಸಬೇಕು ಎಂದು ಎಲ್ಲ ಸಹಕಾರಿ ಧುರೀಣರು ಒತ್ತಾಯಿಸಿದ್ದಾರೆ. ಆದ್ದರಿಂದ, ಮುಂದಿನ ದಿನಮಾನಗಳಲ್ಲಿ ಹರಾಜು ಪ್ರಕ್ರಿಯೆ ಕೈಗೊಂಡಲ್ಲಿ ಉಗ್ರವಾಗಿ ಹೋರಾಟ ಮಾಡುವ ಅನಿವಾರ್ಯತೆ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಮಹಿಳಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ನಿಸ್ಸೀಮಗೌಡ್ರ, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ದರಿಯಪ್ಪಗೌಡ ಪಾಟೀಲ, ಬಿಜೆಪಿ ಮಂಡಲ ಅಧ್ಯಕ್ಷ ಹನುಮಂತಗೌಡ ಮುದಿಗೌಡ್ರ, ಸಹಕಾರಿ ಸಂಘದ ಪೋಷಕರಾದ ಗಂಗಾಧರ ಬಾಣದ, ಶಿವಪುತ್ರಪ್ಪ ಕಲಕೋಟಿ, ಬಸನಗೌಡ ಕೊಪ್ಪದ, ಮಾಲತೇಶ ಬಿಜ್ಜೂರ, ರುದ್ರಗೌಡ ಪಾಟೀಲ, ಗಾಳೆಪ್ಪ ದೊಡ್ಡಪೂಜಾರ ಹಾಗೂ ಇತರರು ಪಾಲ್ಗೊಂಡಿದ್ದರು.

ಶ್ರೀನಿವಾಸ ಗಿತ್ತೆ, ಅಶೋಕ ಯಲಿಗಾರ, ಚನ್ನಬಸಯ್ಯ ದುರ್ಗದಮಠ ನಿರ್ವಹಿಸಿದರು.