ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕೆಸಿಸಿ ಬ್ಯಾಂಕ್ ಮುಖ್ಯ ಶಾಖೆಯಲ್ಲಿ ಬ್ಯಾಂಕಿನ ಸಂಸ್ಥಾಪನಾ ದಿನವನ್ನು ಶನಿವಾರ ಆಚರಿಸಲಾಯಿತು.
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಸ್.ವಿ.ಹೂಗಾರ ಮಾತನಾಡಿ, ಈ ಭಾಗದ ರೈತರಿಗೆ ಆರ್ಥಿಕ ನೆರವು ಒದಗಿಸುವ ಉದ್ದೇಶದಿಂದ ಶಾಂತವೀರಪ್ಪ ಮೆಣಸಿನಕಾಯಿ ಮತ್ತು ಅರಟಾಳ ರುದ್ರಗೌಡರು ಸಹಕಾರ ತತ್ವದಡಿ ಕೆಸಿಸಿ ಬ್ಯಾಂಕ್ ಸ್ಥಾಪಿಸಿದರು. 30 ಸಾವಿರ ರೂ. ಬಂಡವಾಳದೊಂದಿಗೆ ಆರಂಭವಾದ ಬ್ಯಾಂಕ್, ಇಂದು ನೂರಾರು ಕೋಟಿ ರೂ.ಗಳ ವಹಿವಾಟು ನಡೆಸುತ್ತಿದೆ ಎಂದರು.
ರೈತರಿಗೆ ಕೃಷಿ ಸಾಲ, ಕೃಷಿಯೇತರ, ವೇತನ ಆಧಾರಿತ ಸಾಲಗಳು, ಸ್ವಯಂ ಉದ್ಯೋಗಿಗಳಿಗೆ ಆರ್ಥಿಕ ನೆರವು ನೀಡುತ್ತಿದೆ. ಜತೆಗೆ ಸ್ವ ಸಹಾಯ ಸಂಘಗಳಿಗೆ ಹಣಕಾಸು ಸೌಲಭ್ಯ ನೀಡುವ ಮೂಲಕ ಎಲ್ಲ ವರ್ಗಗಳ ಕಲ್ಯಾಣಕ್ಕೆ ಶ್ರಮಿಸುತ್ತಿದೆ. ಠೇವಣಿ ಸಂಗ್ರಹ ಮತ್ತು ಸಾಲ ವಸೂಲಾತಿಯಲ್ಲಿ ನಿರೀಕ್ಷೆ ಮೀರಿ ಪ್ರಗತಿ ಸಾಧಿಸಲಾಗಿದೆ. ನಿರಂತರ ಲಾಭ ಗಳಿಸುವ ಮೂಲಕ ಆರ್ಥಿಕವಾಗಿ ಸದೃಢತೆ ಹೊಂದಲಾಗಿದೆ ಎಂದರು.
ಬ್ಯಾಂಕಿನ ಸಂಸ್ಥಾಪಕರಾದ ರಾವಬಹದ್ದೂರ ಶಾಂತವೀರಪ್ಪ ಮೆಣಸಿನಕಾಯಿ ಹಾಗೂ ರಾವಬಹದ್ದೂರ ಅರಟಾಳ ರುದ್ರಗೌಡರ ಭಾವಚಿತ್ರಕ್ಕೆ ನಮನ ಸಲ್ಲಿಸಲಾಯಿತು.
ಅಧಿಕಾರಿಗಳಾದ ಕೃಷ್ಣಾ ಕಡಕೋಳ, ಮಹಾರಾಜಗೌಡ ಪಾಟೀಲ, ಈಶ್ವರ ಮಾದರ, ಎಂ.ವೈ. ಹೂಗಾರ, ಆರ್.ಎಸ್. ಮುರಗೋಡ, ಎಸ್.ಕೆ. ಅಂಬಿಗೇರ, ಕೆ.ಎನ್. ಗೌಡರ, ಇತರರು ಇದ್ದರು.