ವಿಜಯವಾಣಿ ಸುದ್ದಿಜಾಲ ಧಾರವಾಡ
ಅವಿಭಿಜಿತ ಧಾರವಾಡ ಜಿಲ್ಲೆ ವ್ಯಾಪ್ತಿ ಹೊಂದಿರುವ ಪ್ರತಿಷ್ಠಿತ ಕೆಸಿಸಿ ಬ್ಯಾಂಕ್ ಆಡಳಿತ ಮಂಡಳಿ ಆಯ್ಕೆಗೆ ಮಹೂರ್ತ ನಿಗದಿ (ನ. 23) ಆಗಿದ್ದು, ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತೆರೆಮರೆಯಲ್ಲೇ ಕಸರತ್ತು ನಡೆದಿದೆ.
ಸಪ್ಟೆಂಬರ್‌ನಲ್ಲಿ ಆಡಳಿತ ಮಂಡಳಿಯ 20 ಸ್ಥಾನಗಳಿಗೆ ಚುನಾವಣೆ ನಡೆಸಲಾಗಿತ್ತು. ಕೆಲ ಕಾರಣಕ್ಕೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದರಿಂದ ಕೆಲ ಕ್ಷೇತ್ರಗಳ ಫಲಿತಾಂಶ ವಿಳಂಬವಾಗಿತ್ತು. ಗುರುವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದ ನರಗುಂದ ತಾಲೂಕಿನ ಫಲಿತಾಂಶದೊಂದಿಗೆ ಎಲ್ಲ ಫಲಿತಾಂಶ ಪ್ರಕಟವಾದಂತಾಗಿದೆ.
ಗುರುವಾರ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ನಡೆದ ಮತ ಎಣಿಕೆಯಲ್ಲಿ ಮಹಾಬಳೇಶ್ವರಗೌಡ ಸಿದ್ದನಗೌಡ ಪಾಟೀಲ 13 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಪ್ರತಿಸ್ಪರ್ಧಿ ಮಲ್ಲನಗೌಡ ತಿಮ್ಮನಗೌಡರ 8ಮತಗಳನ್ನು ಪಡೆದು ಸೋಲನುಭವಿಸಿದರು.
ಚುನಾವಣೆ ನಡೆದ ದಿನದಂದು ಹೊರ ಬಂದ ಫಲಿತಾಂಶದಲ್ಲಿ ಕಮಲ ಪಡೆ ಮುನ್ನಡೆ ಸಾಧಿಸಿತ್ತು. ನಂತರದಲ್ಲಿ ಬಂದ ಫಲಿತಾಂಶಲ್ಲಿ 20 ಸದಸ್ಯರಲ್ಲಿ 11 ಕಾಂಗ್ರೆಸ್ ಬೆಂಬಲಿತ, 9 ಜನ ಬಿಜೆಪಿ ಬೆಂಬಲಿತರಿದ್ದಾರೆ. ಇನ್ನು ಜಿಲ್ಲೆಯ ಸಹಕಾರ ಸಂಘಗಳ ಉಪ ನಿಬಂಧಕರು ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಲ್ಲಿ ಮತ ಚಲಾಯಿಸುವ ಅಧಿಕಾರ ಹೊಂದಿದ್ದಾರೆ. ಒಂದು ವೇಳೆ ಬೆಂಬಲಿಗರು ಪಕ್ಷಾಂತರ ಪರ್ವ ನಡೆಸದೆ ಇದ್ದರೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳು ಕೈ ಪಾಲಾಗುವುದು ನಿಶ್ಚಿತ.
ಹಾವೇರಿ, ಗದಗ ಹಾಗೂ ಧಾರವಾಡದ ಹಿರಿಯ ಸದಸ್ಯರ ಹೆಸರುಗಳು ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿದೆ. ಹಾವೇರಿ ಹಾಗೂ ಗದಗ ಸದಸ್ಯರಿಗೆ ಸಚಿವ ಎಚ್.ಕೆ. ಪಾಟೀಲ ಬೆಂಬಲವಿದ್ದರೆ, ಧಾರವಾಡದ ಸದಸ್ಯರಿಗೆ ಉಸ್ತುವಾರಿ ಸಚಿವ ಸಂತೋಷ ಲಾಡ್ ಬೆಂಬಲವಿದೆ. ಈಗಾಗಲೇ ಕಾಂಗ್ರೆಸ್‌ನ ಉಮೇಶ ಹೆಬಸೂರ ಅವರ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿರುವ ಕಮಲ ಪಡೆ ಸಹ ಕೆಸಿಸಿ ಚುಕ್ಕಾಣಿಗೆ ತಂತ್ರ ರೂಪಿಸಿದೆ.