ಜಿಲ್ಲೆ

ಶ್ರೀನಿವಾಸಪುರ ತಾಲೂಕಿನ ಎಲ್ಲ ಕೆರೆಗೂ ಕೆಸಿ ವ್ಯಾಲಿ ನೀರು

Kolar

ಶ್ರೀನಿವಾಸಪುರ: ತಾಲೂಕಿನ ಆಲವಾಟ ಕೆರೆಗೆ ಸೋಮವಾರ ಕೆಸಿ ವ್ಯಾಲಿ ನೀರು ಹರಿದಿದೆ. ಮುಂಬರುವ ದಿನಗಳಲ್ಲಿ ಎಲ್ಲ ಕೆರೆಗಳಿಗೆ ಹರಿಯಲಿದೆ. ಜನ್ನಘಟ್ಟ ಕೆರೆ 3 ದಿನಗಳಲ್ಲಿ ಕೋಡಿ ಹರಿಯಲಿದ್ದು, ಮುದುವಾಡಿ ಕೆರೆಗೆ ನೀರು ಹರಿಯಲಿದೆ. ಯೋಜನೆಯಲ್ಲಿರುವ ಎಲ್ಲ ಕೆರೆಗಳಿಗೂ ನೀರು ಬರಲಿವೆ ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ಹೇಳಿದರು.

ಡಿಸಿಸಿ ಬ್ಯಾಂಕ್ ಯಲ್ದೂರಿನ ವಿಎಸ್‌ಎಸ್‌ಎನ್ ಮೂಲಕ ಶೂನ್ಯಬಡ್ಡಿಯಲ್ಲಿ ಮಂಗಳವಾರ 260 ರೈತರಿಗೆ 2.60 ಕೋಟಿ ರೂ. ಬೆಳೆ ಸಾಲದ ಚೆಕ್ ವಿತರಿಸಿ ಮಾತನಾಡಿ, ಸಾಲದ ಹಣವನ್ನು ರೈತರು ಗೊಬ್ಬರ, ಬೀಜ ಹಾಗೂ ಬಿತ್ತನೆಗೆ ಉಪಯೋಗಿಸಿಕೊಳ್ಳಬೇಕು. ಕಷ್ಟ ಇರುವ ಸಣ್ಣ ರೈತರಿಗೆ ಮಾತ್ರ ಸಾಲ ನೀಡುವಂತಾಗಬೇಕು. ಶೂನ್ಯಬಡ್ಡಿ ಎಂದು ಸಾಲ ಪಡೆದು ಬೇರೆ ವ್ಯವಹಾರಗಳಿಗೆ ಉಪಯೋಗಿಸಿಕೊಳ್ಳುವವರಿಗೆ ಸಾಲ ನೀಡಬಾರದು ಎಂದರು.

ಅವಶ್ಯಕತೆ ಇರುವ ಎಲ್ಲ ರೈತರಿಗೂ ಪಕ್ಷ, ಜಾತಿ ನೋಡದೆ ಸಾಲ ವಿತರಣೆ ಮಾಡಬೇಕು. ಸಹಕಾರ ಸಂಘದಲ್ಲಿ ಪ್ರತಿ ಮನೆಗೆ ಒಬ್ಬರಂತೆ ಸದಸ್ಯತ್ವ ನೀಡಿದರೆ ಆಗ ಎಲ್ಲರಿಗೂ ಸಾಲ ದೊರೆಯುತ್ತದೆ. ಪ್ರತಿ ಮನೆಯಲ್ಲಿರುವವರಿಗೆ ಸಹಕಾರ ಸಂಘಗಳು ಸದಸ್ಯತ್ವ ನೀಡಬೇಕು ಎಂದು ವಿಎಸ್‌ಎಸ್‌ಎನ್ ಅಧ್ಯಕ್ಷ ನಾರಾಯಣಸ್ವಾಮಿಗೆ ಸೂಚಿಸಿದರು.

ಕೆಸಿ ವ್ಯಾಲಿ ನೀರು 7 ತಿಂಗಳಾದರು ಕೆಲವು ಕೆರೆಗಳಲ್ಲಿಯೇ ನಿಲ್ಲುವಂತಾಗಿ ಜನ್ನಘಟ್ಟ ಕೆರೆಗೆ ಒಂದು ಹನಿ ನೀರೂ ಬರಲಿಲ್ಲ. ಯಾರು ಏನೇ ಕೂಗಾಡಿದರೂ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಕೆಲ ಪಟ್ಟಬದ್ಧ ಶಕ್ತಿಗಳು ಜನರೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಅದಕ್ಕೆ ನಾನು ಅವಕಾಶ ನೀಡುವುದಿಲ್ಲ. ಕೆಲ ಕೆರೆಗಳಲ್ಲಿ ನೀರಿನ ಪ್ರಮಾಣ ಕಡಿಮೆ ಮಾಡಿ ಎಲ್ಲ ಕೆರೆಗಳಿಗೂ ಹರಿಯುವಂತೆ ಅಧಿಕಾರಿಗಳು ಮಾಡುತ್ತಿದ್ದಾರೆ. ಗಣೇಶ ಚತುರ್ಥಿ, ದೀಪಾವಳಿ ಹಾಗೂ ಯುಗಾದಿಯೊಳಗೆ ತಾಲೂಕಿನ ಎಲ್ಲ ಕೆರೆಗಳಿಗೂ ನೀರು ಬರಲಿದೆ ಎಂದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಮಾತನಾಡಿ, ಎಲ್ಲ್ಲ ರೈತರು ಸರ್ಕಾರದ ನಿಯಮದಂತೆ ಎಟಿಎಂ ಮೂಲಕವೇ ಸಾಲದ ಹಣ ಪಡೆಯಬೇಕು. ಕರೊನಾ ಕಷ್ಟ ಕಾಲದಲ್ಲಿ ಬ್ಯಾಂಕ್‌ಗೂ ಸಂಕಷ್ಟ ಎದುರಾಗಿದೆ. ಆದರೂ ರೈತರಿಗೆ ತೊಂದರೆಯಾಗದಂತೆ ಬೆಳೆ ಸಾಲ ಮುಂದುವರಿಸಲಾಗುವುದು ಎಂದರು.

ಜಿಪಂ ಸದಸ್ಯ ಗೋವಿಂದಸ್ವಾಮಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ವಿಎಸ್‌ಎಸ್‌ಎನ್ ಉಪಾಧ್ಯಕ್ಷ ವೆಂಕಟೇಶಪ್ಪ, ಟಿಪಿಎಸ್ ಮಾಜಿ ಸದಸ್ಯೆ ಗೌರಮ್ಮ, ಗ್ರಾಪಂ ಮಾಜಿ ಅಧ್ಯಕ್ಷ ಜಯಣ್ಣ, ಯಲ್ದೂರು ವಿಎಸ್‌ಎಸ್ ನಿರ್ದೇಶಕರಾದ ಶ್ರೀನಿವಾಸಗೌಡ, ಟಿ.ನಾರಾಯಣಸ್ವಾಮಿ, ಆರ್.ಲಿಂಗಪ್ಪ, ಕೃಷ್ಣೇಗೌಡ, ಮುಖಂಡರಾದ ಲಕ್ಷ್ಮೀಸಾಗರ ಅಶೋಕ್, ಸೊಸೈಟಿ ಸಿಇಒ ಪ್ರಭಾಕರರೆಡ್ಡಿ ಉಪಸ್ಥಿತರಿದ್ದರು.