ಜಿಲ್ಲೆ

ಕೆಸಿ ವ್ಯಾಲಿ ಚೆಕ್‌ಡ್ಯಾಂ ನಾಶಕ್ಕೆ ಯತ್ನ

Kolar

ಕ್ಯಾಲನೂರು: ಲಕ್ಷಾಂತರ ರೂ. ಖರ್ಚು ಮಾಡಿ ೆಸಿ ವ್ಯಾಲಿ ನೀರಿಗೆ ಅಡ್ಡಲಾಗಿ ನಿರ್ಮಿಸಿದ್ದ ಬೃಹತ್ ಚೆಕ್‌ಡ್ಯಾಂ ನಾಶಕ್ಕೆ ಅಧಿಕಾರಿಗಳು ಮುಂದಾದಾಗ ರೈತರು ಪ್ರತಿಭಟನೆ ನಡೆಸಿದ್ದರಿಂದಾಗಿ ಮಾತಿನ ಚಕಮಕಿ ನಡೆದು ಉದ್ವಿಗ್ನತೆ ತಲೆದೋರಿದ್ದು, ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ತಾಲೂಕಿನ ವೇಮಗಲ್ ಹೋಬಳಿಯ ವೀರಾಪುರ ಸಮೀಪ ಕೆಸಿ ವ್ಯಾಲಿ ನೀರು ಅಗ್ರಹಾರ ಕೆರೆಗೆ ಹರಿದು ಹೋಗುತ್ತಿದ್ದು, ಈಗಾಗಲೆ ಚೆಕ್‌ಡ್ಯಾಂ ತುಂಬಿ ನೀರು ಮುಂದೆ ಸಾಗಿದೆ. ಆದರೆ ಚೆಕ್‌ಡ್ಯಾಂನಲ್ಲಿನ ನೀರನ್ನೂ ಡ್ಯಾಂ ಗೋಡೆ ಒಡೆದು ಹರಿಸಲು ಇಂಜಿನಿಯರ್‌ಗಳಾದ ನಾಗರಾಜ್, ಸುರೇಶ್‌ಕುಮಾರ್, ಶಶಿಕುಮಾರ್, ಕಲ್ಲು ಕುಟ್ಟುವ ಟ್ರ್ಯಾಕ್ಟರ್ ಸಮೇತ ಆಗಮಿಸಿ ಚೆಕ್‌ಡ್ಯಾಂ ಗೋಡೆ ನಾಶಪಡಿಸುವ ಕಾರ್ಯಕ್ಕೆ ಶುಕ್ರವಾರ ಮುಂದಾಗಿದ್ದರು.

ವಿಷಯ ತಿಳಿದ ಸುತ್ತಮುತ್ತಲ ಗ್ರಾಮಗಳ 150ಕ್ಕೂ ಹೆಚ್ಚು ರೈತರು ಸ್ಥಳಕ್ಕೆ ಧಾವಿಸಿ ಅಡ್ಡಿಪಡಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಸ್ಥಳಕ್ಕೆ ಬಂದ ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ರೈತರನ್ನು ಸಮಾಧಾನಪಡಿಸಿ, ಸದ್ಯಕ್ಕೆ ಚೆಕ್‌ಡ್ಯಾಂ ಕೀಳುವ ಕೆಲಸ ಕೈಬಿಡಿ ಎಂದು ಸೂಚಿಸಿ ಅಧಿಕಾರಿಗಳನ್ನು ವಾಪಸ್ ಕಳುಹಿಸಿದರು.

ಪ್ರತಿಭಟನೆಯಲ್ಲಿ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಚೆಂಜಿಮಲೆ ರಮೇಶ್, ರೈತರಾದ ನಾಗರಾಜ್, ವೆಂಕಟೇಶ್, ನಾರಾಯಣಪ್ಪ, ಸುರೇಶ್, ರಾಮಣ್ಣ, ಡಿಲ್ಲಿ ಮುನಿರಾಜು, ಈರಪ್ಪ, ಜೆಸಿಬಿ ಮಂಜು, ಕಿಟ್ಟಿ, ನಾರಾಯಣಸ್ವಾಮಿ, ಮುನಿರಾಜು ಸೇರಿ ಸೀತಿ, ಚೆಂಜಿಮಲೆ, ವೀರಾಪುರ, ಹುಲ್ಲಂಕಲ್ಲು, ರಾಜಕಲ್ಲಹಳ್ಳಿ ಮತ್ತಿತರ ಗ್ರಾಮಗಳ ರೈತರು ಭಾಗವಹಿಸಿದ್ದರು.

ಅಂತರ್ಜಲ ವೃದ್ಧಿಗೆ ಕಂಟಕ: ಕೆಸಿ ವ್ಯಾಲಿ ನೀರು ಮುಂದಿನ ಕೆರೆಗಳಿಗೆ ಹರಿಯಲಿ, ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಕೋಟ್ಯಂತರ ರೂ. ಖರ್ಚು ಮಾಡಿ ನಿರ್ಮಿಸಿದ ಚೆಕ್ ಡ್ಯಾಂಗಳನ್ನು ಏಕಾಏಕಿ ನಾಶಪಡಿಸುವ ಉದ್ದೇಶವೇನು? ಈಗಾಗಲೆ ಚೆಕ್‌ಡ್ಯಾಂ ತುಂಬಿ ಮುಂದಿನ ಕೆರೆಗಳಿಗೆ ನೀರು ಹರಿಯುತ್ತಿದೆ. ಹೀಗಿರುವಾಗ ಈಗ ಚೆಕ್‌ಡ್ಯಾಂ ಒಡೆದು ನಿಂತಿರುವ ಎಲ್ಲ ನೀರನ್ನು ಹರಿಸುವುದರಿಂದ ಈ ಭಾಗದಲ್ಲಿ ಅಂತರ್ಜಲ ವೃದ್ಧಿಗೆ ಕಂಟಕವಾಗುತ್ತದೆ ಎಂದು ಗ್ರಾಮಸ್ಥರು ದೂರಿದರು.