ವಿಜಯಾಚಾರ್ಯ ಪುರೋಹಿತ ಕೆಂಭಾವಿ
ಸರ್ಕಾರದ ಪ್ರಮುಖ ಇಲಾಖೆ ಎಂದೆ ಕರೆಯಲ್ಪಡುವ ಬೃಹತ್ ನೀರಾವರಿ ಇಲಾಖೆಯಲ್ಲಿ ಒಂದಾದ ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ ಪ್ರತಿವರ್ಷ ಸಾವಿರಾರು ಕೋಟಿ ರೂಗಳ ಅನುದಾನ ಬರುತ್ತಿದ್ದರೂ ತಮ್ಮ ಇಲಾಖೆಯ ಮುಖ್ಯ ಕಚೇರಿ ಸೇರಿ ವಸತಿ ಗೃಹಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನೆ ದುರಸ್ತಿಗೊಳಿಸದ ಅಧಿಕಾರಿಗಳ ನಡೆಗೆ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಪಟ್ಟಣದ ಹಿಲ್ಟಾಪ್ ಕಾಲನಿಯಲ್ಲಿರುವ ಇಲಾಖೆಯ ಹಲವು ಕಚೇರಿಗಳು, ವಸತಿ ಗೃಹಗಳು ಮುಖ್ಯವಾಗಿ ಪ್ರವಾಸಿ ಮಂದಿರಕ್ಕೆ ಪಟ್ಟಣದ ಹಳೇ ಬಸ್ ನಿಲ್ದಾಣ ಪ್ರದೇಶದಿಂದ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಕಿತ್ತುಹೋಗಿ ವರ್ಷಗಳೇ ಕಳೆದರೂ ಈವರೆಗೂ ಇಲಾಖೆಯ ಅನೇಕ ಹಿರಿಯ ಅಧಿಕಾರಿಗಳು ಮಾತ್ರ ಇತ್ತ ಕಡೆ ಗಮನ ಕೊಡದೆ ಇರುವುದು ವಿಶೇಷವಾಗಿದೆ. ಕೆಬಿಜೆಎನ್ಎಲ್ ಇಲಾಖೆಯ ಉಪ ಕಚೇರಿಗಳು, ಸುಮಾರು 200ಕ್ಕೂ ಹೆಚ್ಚು ವಸತಿ ಗೃಹಗಳು, 10 ಗೋದಾಮು, ಪ್ರವಾಸಿ ಮಂದಿರ, ಇಲಾಖೆ ಬಾಡಿಗೆ ನೀಡಿದ ಖಾಸಗಿ ಶಾಲೆಗಳು ಈ ಸ್ಥಳದಲ್ಲಿದ್ದು, ಜನತೆ ಹಾಗೂ ಇಲಾಖೆಯ ನೌಕರರು ನಿತ್ಯ ಈ ಮಾರ್ಗದಿಂದಲೆ ತಮ್ಮ ಜೀವದ ಹಂಗು ತೊರೆದು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಪ್ರತಿ ತಿಂಗಳು ಇಲಾಖೆಗೆ ಮನೆಗಳ ಬಾಡಿಗೆ ಹಾಗೂ ಗೋದಾಮುಗಳ ಬಾಡಿಗೆ ಸೇರಿ 1.50 ಲಕ್ಷ ರೂಗಳವರೆಗೂ ಆದಾಯವಿದೆ ಎಂದು ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ. ಅಧಿಕಾರಿಗಳು ಮನಸ್ಸು ಮಾಡಿದರೆ ಕೇವಲ ಬಾಡಿಗೆ ಹಣದಲ್ಲೆ ರಸ್ತೆ ರಿಪೇರಿ ಮಾಡಬಹುದು. ಆದರೂ ದಶಕವೇ ಕಳೆದರೂ ರಸ್ತೆಯ ಮರು ಡಾಂಬರೀರಣಕ್ಕೆ ಅಧಿಕಾರಿಗಳು ಮುತುವಜರ್ಿ ವಹಿಸದಿರುವುದು ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.
ಅಧಿಕಾರಿಗಳು, ಗಣ್ಯರು, ಜನ ಪ್ರತಿನಿಧಿಗಳು ವಿಶ್ರಾಂತಿಗಾಗಿ ಇದೇ ರಸ್ತೆಯ ಮೂಲಕ ಪ್ರವಾಸಿ ಮಂದಿರಕ್ಕೆ ತೆರಳುವವರಾದರೂ ಸಹ ರಸ್ತೆ ದುರಸ್ತಿ ಕುರಿತು ಗಮನ ಹರಿಸದೆ ಇರುವುದು ವಿಷಾದನೀಯ ಸಂಗತಿ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈಗಲಾದರೂ ಅಧಿಕಾರಿಗಳು ವಿಶೇಷ ಗಮನ ಹರಿಸಿ ರಸ್ತೆ ದುರಸ್ತಿಗೊಳಿಸುವರೆ ಎಂಬುದು ಕಾದು ನೋಡಬೇಕು.