ವಿಜಯಪುರದ ಕೃಷ್ಣಮಠದಲ್ಲಿ ಉಡುಪಿ ಪೇಜಾವರ ಮಠದ ಪೀಠಾಧಿಪತಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸುದ್ದಿಗೋಷ್ಠಿ ನಡೆಸಿದರು.  
ಜಿಲ್ಲೆ

ಐವತ್ತು ವರ್ಷದ ಹಳೆಯ ಕಟ್ಟಡಕ್ಕೆ ಕಾಯಕಲ್ಪ; ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ವಿಜಯಪುರ: ಬ್ರಾಹ್ಮಣ ವಟುಗಳ ಅಧ್ಯಯನ, ಸ್ನಾನ, ಸಂಧ್ಯಾವಂದನೆ ಮತ್ತಿತರ ನಿತ್ಯಾನುಷ್ಟಾನಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕಳೆದ 50 ವರ್ಷಗಳ ಹಿಂದೆ ಪೇಜಾವರದ ವಿಶ್ವೇಶತೀರ್ಥ ಶ್ರೀಪಾದಂಗಳು ನಿರ್ಮಿಸಿದ್ದ ಗಂಗಾಬಾಯಿ ಆನಂದಾಚಾರ್ಯ ಆದ್ಯ ವಿದ್ಯಾರ್ಥಿನಿಲಯ ಶಿಥಿಲಗೊಂಡಿದ್ದು, ಅದರ ಪುನರುಜ್ಜೀವನಕ್ಕೆ ದೇಣಿಗೆ ಸಂಗ್ರಹಿಸಲಾಗುತ್ತಿದೆ ಎಂದು ಉಡುಪಿ ಪೇಜಾವರ ಮಠದ ಪೀಠಾಧಿಪತಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಗುರುಗಳಾಗಿದ್ದ ವಿಶ್ವೇಶತೀರ್ಥ ಶ್ರೀಪಾದಂಗಳು ಅಖಿಲ ಭಾರತ ಮಾಧ್ವ ಮಹಾ ಮಂಡಳ ಸ್ಥಾಪಿಸಿ ಆ ಮೂಲಕ ನಾಡಿನ ನಾನಾ ಭಾಗಗಳಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪಿಸಿದ್ದರು. ಅದೇ ರೀತಿ ವಿಜಯಪುರದಲ್ಲಿ ಗಂಗಾಬಾಯಿ ಆನಂದಾಚಾರ್ಯ ಆದ್ಯ ವಿಧ್ಯಾರ್ಥಿ ನಿಲಯ ಸ್ಥಾಪಿಸಿದ್ದರು. ಶಿಥಿಲಾವಸ್ಥೆಗೊಂಡಿರುವ ಈ ಕಟ್ಟಡಕ್ಕೆ ಕಾಯಕಲ್ಪ ಕಲ್ಪಿಸಲು ಎರಡು ದಿನ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಹೊಸ ಕಟ್ಟಡ ನಿರ್ಮಿಸಿ ಅದರಲ್ಲಿ ಅತ್ಯಾಧುನಿಕ ಸೌಲಭ್ಯ ಕಲ್ಪಿಸಲಾಗುವುದು. ಲ್ಯಾಪ್‌ಟಾಪ್ ಇಡುವುದು ಸೇರಿದಂತೆ ಇತರ ಸೌಲಭ್ಯಗಳಿಗೆ ಅವಕಾಶ ನೀಡಲಾಗುವುದು. ಈಗಿನ ಕಾಲಕ್ಕೆ ಅನುಗುಣವಾಗಿ ಅಂದಾಜು 4 ಕೋಟಿ ರೂ.ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗುವುದೆಂದರು. ಅದಕ್ಕಾಗಿ ಮನೆ ಮನೆಗೆ ಭೇಟಿ ನೀಡಿ ದೇಣಿಗೆ ಸಂಗ್ರಹಿಸಲಾಗುವುದು. ಹಳೆಯ ವಿದ್ಯಾರ್ಥಿಗಳಿಗೂ ಕೈ ಜೋಡಿಸುವಂತೆ ತಿಳಿಸಲಾಗುವುದು ಎಂದರು.
ಮುಖಂಡರಾದ ಗೋಪಾಲ ನಾಯಕ, ಪ್ರಕಾಶ ಅಕ್ಕಲಕೋಟ, ಶ್ರೀಪಾದ ಸಿಂಗಮಲ್ಲೆ, ಅಶೋಕ ರಾವ್, ವಿಜಯ ಜೋಶಿ, ವಿಕಾಸ್ ಪದಕಿ, ರಾಕೇಶ ಕುಲಕರ್ಣಿ ಮತ್ತಿತರರಿದ್ದರು.