ಯಲಬುರ್ಗಾ ತಾಲೂಕಿನ ಗುಳೆದಲ್ಲಿ ತಿಂಗಳ ಪಯರ್ಂತ ಹಮ್ಮಿಕೊಂಡಿದ್ದ ಮನೆ ಮನೆಗೆ ವಚನ ಜ್ಯೋತಿ ಸಮಾರೋಪ ಸಮಾರಂಭವನ್ನು ಬೇಳೂರು ಗುರು ಬಸವೇಶ್ವರ ಮಠದ ಡಾ.ಮಹಾಂತಲಿಂಗ ಸ್ವಾಮೀಜಿ ಉದ್ಘಾಟಿಸಿದರು. ನಿವೃತ್ತ ಪ್ರಾಚಾರ್ಯ ಟಿ.ಬಸವರಾಜ,ಪ್ರಮುಖರಾದ ಶಿವಸಂಗಪ್ಪ ಬಿಜಕಲ್, ರಾಮನಗೌಡ ಪಾಟೀಲ್, ಡಾ.ಎಸ್.ಎಸ್.ಸುಂಕದ, ಬಸವರಾಜಪ್ಪ ಕೋಳಿಹಾಳ, ನಾಗನಗೌಡ ಇದ್ದರು. 
ಜಿಲ್ಲೆ

ಕಾಯಕ ನಿಷ್ಠೆ ಬದುಕಿಗೆ ಅಳವಡಿಸಿಕೊಳ್ಳಿ

Kopala - Desk - Eraveni

ಯಲಬುರ್ಗಾ: ಸಮಾಜದಲ್ಲಿ ದೇವಾಲಯ ವ್ಯವಸ್ಥೆ ಜಡಗೊಂಡು ಮೇಲು-ಕೀಳು, ಶ್ರೇಷ್ಠ-ಕನಿಷ್ಠನೆಂಬ ತಾರತಮ್ಯ ತಾಂಡವಾಡುತ್ತಿದ್ದು, ಇದರಿಂದ ಬೇಸತ್ತ ಬಸವಣ್ಣನವರ ಸಾಕ್ಷಾತ್ಕಾರದಿಂದ ಹುಟ್ಟಿದ್ದೇ ಇಷ್ಟಲಿಂಗ ಪರಿಕಲ್ಪನೆ ಎಂದು ಬೇಳೂರು ಗುರು ಬಸವೇಶ್ವರ ಮಠದ ಡಾ.ಮಹಾಂತಲಿಂಗ ಸ್ವಾಮೀಜಿ ಹೇಳಿದರು.

ತಾಲೂಕಿನ ಗುಳೆ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ತ ತಿಂಗಳ ಪರ್ಯಂತ ಹಮ್ಮಿಕೊಂಡಿದ್ದ ಮನೆ ಮನೆಗೆ ಅನುಭಾವದ ವಚನ ಜ್ಯೋತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಈಚೇಗೆ ಮಾತನಾಡಿದರು.

ಬಸವ ಧರ್ಮದಲ್ಲಿ ಇಷ್ಟಲಿಂಗ ಪರಿಕಲ್ಪನೆ ಇದೆ. ಇಲ್ಲಿ ದೇವಸ್ಥಾನಕ್ಕೆ ಭಕ್ತ ಹೋಗಬೇಕಾದ ಅಗತ್ಯವಿಲ್ಲ. ಭಕ್ತನ ದೇಹವನ್ನೇ ದೇವಾಲಯವಾಗಿಸುವ ಸದುದ್ದೇಶವಿದೆ. ಶರಣ ದರ್ಶನ ಪ್ರವಚನ ಉನ್ನತ ಸಾಧನೆಗೆ ಮೆಟ್ಟಿಲಾಗಲಿ.

ಶ್ರಾವಣ ಮಾಸದ ವಚನ ಜ್ಯೋತಿ ಕಾರ್ಯದಲ್ಲಿ 30 ಶರಣರ ದರ್ಶನ ಮತ್ತು ಅವರ ಆದರ್ಶ ಕುರಿತು ಬಿತ್ತರಿಸುತ್ತಿರುವುದು ಶ್ಲಾಘನೀಯ. ಎಲ್ಲರೂ ಶರಣರ ಕಾಯಕ ನಿಷ್ಠೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಮುನ್ನಡೆಯಬೇಕು ಎಂದರು.

ನಿವೃತ್ತ ಪಿಎಸ್ ಬಸನಗೌಡ ಪೊಲೀಸ್ ಪಾಟೀಲ್ ಮಾತನಾಡಿ, ಶರಣರ ವಾಣಿಯನ್ನು ಶ್ರವಣ ಮಾಡುವುದೇ ಶ್ರಾವಣಮಾಸ. ಅಸತ್ಯದ ಭ್ರಮೆ ತೊಲಗಿಸಿ ಸತ್ಯದ ಭಾವ ಮಾಸದಂತಿರಲು ಶ್ರಾವಣ ಮಾಸ ಸಹಾಯಕವಾಗಿರುತ್ತದೆ ಎಂದರು.

ರಾಷ್ಟ್ರೀಯ ಬಸವದಳ ಕಾರ್ಯದರ್ಶಿ ಬಸವರಾಜ ಹೂಗಾರ ಮಾತನಾಡಿ, ಶ್ರಾವಣ ಮಾಸದಲ್ಲಿ ತಿಂಗಳ ಕಾಲ ಮನೆ ಮನಕ್ಕೆ ವಚನ ಕಟ್ಟು ಹೊತ್ತು ಪ್ರಾರ್ಥನೆ, ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿತು. ಶರಣರ ಅನುಭಾವ, ವಿಚಾರಗಳನ್ನು ತಿಳಿಸಲಾಯಿತು.

ಮೌಢ್ಯ ತೊಲಗಿಸಿ ಮೌಲ್ಯಾಂಶ ಬಿತ್ತರಿಸಿ ಮನಃಪರಿವರ್ತನೆ ಮಾಡುವುದೇ ವಚನಜ್ಯೋತಿ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು. ಕೊನೆಯ ದಿನದ ವಚನ ಜ್ಯೋತಿ ಪೂಜಾ ಕಾರ್ಯ ಮಂಜುನಾಥ ಮಂತ್ರಿ, ಬಸವರಾಜ ಹೂಗಾರ ಮನೆಯಲ್ಲಿ ನಡೆಯಿತು.

ಕುಷ್ಟಗಿಯ ಬಸವ ಸಮಿತಿ ಅಧ್ಯಕ್ಷ ಶಿವಸಂಗಪ್ಪ ಬಿಜಕಲ್, ಜಾಗತಿಕ ಲಿಂಗಾಯತ ಧರ್ಮ ಮಹಾಸಭಾದ ಅಧ್ಯಕ್ಷ ಟಿ.ಬಸವರಾಜ, ಗುಳೆ ರಾಷ್ಟ್ರೀಯ ಬಸವದಳ ಅಧ್ಯಕ್ಷ ರೇಣುಕಪ್ಪ ಮಂತ್ರಿ, ಪ್ರಮುಖರಾದ ರಾಮನಗೌಡ ಪಾಟೀಲ್, ಡಾ.ಎಸ್.ಎಸ್. ಸುಂಕದ, ಬಸವರಾಜಪ್ಪ ಕೋಳಿಹಾಳ,

ನಾಗನಗೌಡ ಜಾಲಿಹಾಳ, ಶಿವಬಸಯ್ಯ ಹಿರೇಮಠ, ಅಮರೇಶಪ್ಪ ಬಳ್ಳಾರಿ, ಸಾವಿತ್ರಮ್ಮ, ಬಸಮ್ಮ ಹೂಗಾರ, ಶರಣಪ್ಪ ಹೊಸಳ್ಳಿ, ದೇವಪ್ಪ ಕೋಳೂರು, ಗವೀಶ ಶಸಿಮಠ, ಅಕ್ಕನಾಗಲಾಂಬಿಕೆ ಮಹಿಳಾ ಗಣದ ಸದಸ್ಯರಾದ ಸಾವಿತ್ರಮ್ಮ, ಅಕ್ಕಮಹಾದೇವಿ ಮೇಟಿ, ಶಂಕ್ರಮ್ಮ ಹೊಸಳ್ಳಿ ಇತರರಿದ್ದರು.