ವಿಜಯಪುರ: ಘನತೆಯ ಬದುಕು ರೂಪಿಸಿಕೊಳ್ಳಲು ಕಾಯಕ ತತ್ವ ಅಳವಡಿಸಿಕೊಂಡು ಕಾಯಕದಲ್ಲಿ ನಿರತರಾಗುವುದರ ಮೂಲಕ ಜೀವನವನ್ನು ಸುಂದರಗೊಳಿಸಿಕೊಳ್ಳೋಣ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರು ಹೇಳಿದರು.
ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತದಿಂದ ಸೋಮವಾರ ಹಮ್ಮಿಕೊಂಡಿದ್ದ ಕಾಯಕ ಶರಣರಾದ ಮಾದರ ಚನ್ನಯ್ಯ, ಮಾದರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗ ಪೆದ್ದಿ ಅವರ ಜಯಂತಿ ಆಚರಣೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಶರಣರು ಮೌಲ್ಯಯುತ ಕಾಯಕ ಜೀವನ ನಡೆಸುವುದರ ಮೂಲಕ ಸಮಾಜಕ್ಕೆ ಜ್ಞಾನದ ಬೆಳಕು ತೋರಿದರು. ಜನಸಾಮಾನ್ಯರಾಡುವ ಭಾಷೆಯಲ್ಲಿ ವಚನಗಳನ್ನು ಶರಣರು ನೀಡಿದ್ದಾರೆ. ಶರಣರ ವಚನಗಳು ಸಾರ್ವಕಾಲಕ್ಕೂ ಪ್ರಸ್ತುತವಾಗಿದ್ದು, ಕಾಯಕ ತತ್ವದ ಮಹತ್ವವನ್ನು ವಚನಗಳಲ್ಲಿ ಕಾಣಬಹುದು. ಶರಣರು ತಮ್ಮ ವಚನದ ಮೂಲಕ ಸಮಾಜವನ್ನು ತಿದ್ದುವ ಕಾರ್ಯ ಮಾಡಿದ್ದಾರೆ. ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ಮುಂದೆ ಸಾಗಬೇಕು ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಮಾತನಾಡಿ, ನಾವು ನಿರ್ವಹಿಸುವ ಕಾರ್ಯವನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಬೇಕು. ಶರಣರ ಆಶಯವೂ ಇದೇ ಆಗಿತ್ತು. ಶರಣರ ವಚನ ತತ್ವಾದರ್ಶಗಳನ್ನು ಇಂದಿನ ಯುವ ಪೀಳಿಗೆ ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಅಕ್ಕ ಮಹಾದೇವಿ ಮಹಿಳಾ ವಿವಿ ಉಪನ್ಯಾಸಕಿ ಲಕ್ಷ್ಮಿದೇವಿ ಅವರು ಮಾದರ ಧೂಳಯ್ಯ ಹಾಗೂ ಡೋಹರ ಕಕ್ಕಯ್ಯರ ಕುರಿತು ಉಪನ್ಯಾಸ ನೀಡುತ್ತಾ, ಶರಣರ ವಚನಗಳಿಂದ ಪ್ರೇರಣೆ ಪಡೆಯುವುದರ ಮೂಲಕ ಶರಣ ತತ್ವಾದರ್ಶ ಹಾಗೂ ಅವರ ಜೀವನಾದರ್ಶ ಇಂದಿನ ಯುವ ಜನಾಂಗ ಮೈಗೂಡಿಸಿಕೊಳ್ಳಬೇಕು ಎಂದರು. ಪ್ರೊ.ಮಹಾದೇವ ರೆಬಿನಾಳ ಅವರು ಸಮಗಾರ ಹರಳಯ್ಯ ಹಾಗೂ ಉರಿಲಿಂಗ ಪೆದ್ದಿಯವರ ಕುರಿತು ಉಪನ್ಯಾಸ ನೀಡಿದರು.
ಜಿಪಂ ಯೋಜನಾ ಮತ್ತು ಅಂದಾಜು ಮೌಲ್ಯಮಾಪನ ಅಧಿಕಾರಿ ಎ.ಬಿ. ಅಲ್ಲಾಪೂರ, ಮುಖಂಡರಾದ ಭೀಮರಾಯ ಜಿಗಜಿಣಗಿ, ಅಶೋಕ ಸೌದಾಗರ, ದಿಲೀಪ ಪೋಳ ಮತ್ತಿತರರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಕಂದಗಲ್ಲ ಹನುಮಂತರಾಯ ರಂಗಮಂದಿರದ ವರೆಗೆ ಭಾವಚಿತ್ರಗಳ ಭವ್ಯ ಮೆರವಣಿಗೆ ನಡೆಯಿತು.