ಜಮಖಂಡಿ: ದುಡಿಮೆ ಮನುಷ್ಯನಿಗೆ ಸ್ವಾಭಿಮಾನ, ಆತ್ಮವಿಶ್ವಾಸ ಮತ್ತು ಜವಾಬ್ದಾರಿ ಹೆಚ್ಚಿಸುತ್ತದೆ. ಕಾಯಕ ನಿಷ್ಠೆ ಬದುಕನ್ನು ಸಮತೋಲನದಲ್ಲಿ ಇಡುತ್ತದೆ. ದಾಸೋಹ ಮಾಡುವ ಅವಕಾಶ ಕಾಯಕದಿಂದಲೇ ಲಭಿಸುತ್ತದೆ ಎಂದು ಭಾಲ್ಕಿಯ ಹಿರೇಮಠ ಸಂಸ್ಥಾನದ ಮಹಾಲಿಂಗ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಹುಲ್ಯಾಳ ಗ್ರಾಮದ ಗುರುದೇವಾಶ್ರಮದಲ್ಲಿ ಶ್ರೀ ಗುರುದೇವ ಸತ್ಸಂಗ ಬಳಗದ ಆಶ್ರಯದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಶ್ರೀ ಗುರುದೇವ ಸತ್ಸಂಗ ಮಾಸಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಂಪತ್ತು ಒಂದೆಡೆ ಕೇಂದ್ರೀಕೃತವಾದರೆ ಸಮಾಜದಲ್ಲಿ ಎಲ್ಲ ಬಗೆಯ ಅಸಮಾನತೆ ಹುಟ್ಟುತ್ತವೆ. ಕಾಯಕ ಸಾರ್ಥಕವಾಗುವುದೆ ದಾಸೋಹದಿಂದ. ಸಮಸಮಾಜ ನಿರ್ಮಾಣಕ್ಕೆ ದಾಸೋಹ ಅಗತ್ಯ. ಕಾಯಕ ಮತ್ತು ದಾಸೋಹ ಒಂದೇ ನಾಣ್ಯದ ಎರಡು ಮುಖಗಳು ಎಂದರು.
ಭಾಲ್ಕಿಯ ಹಿರೇಮಠ ಸಂಸ್ಥಾನದ ಬಸವಲಿಂಗ ದೇವರು ಸಾನ್ನಿಧ್ಯ ವಹಿಸಿ ಮಾತನಾಡಿ, ಶಿಷ್ಯನ ಆಧ್ಯಾತ್ಮಿಕ ಸಾಧನೆಗೆ ಗುರುಗಳ ಕರುಣೆ ಅಗತ್ಯ. ಗುರುಗಳ ಕರುಣೆಯಿಂದ ಶಿಷ್ಯನ ಅಜ್ಞಾನ ದೂರವಾಗುತ್ತದೆ ಎಂದರು.
ಶ್ರೀ ಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿ, ತನ್ನ ಬಗ್ಗೆ ತನಗೆ ಅರಿವು ಉಂಟು ಮಾಡಿಕೊಳ್ಳುವುದನ್ನು ಅನುಭಾವ ಎನ್ನಲಾಗುತ್ತದೆ ಎಂದು ಆಶೀರ್ವಚನ ನೀಡಿದರು.
ಪುಂಡಲೀಕ ಭಜಂತ್ರಿ ಕ್ಲಾೃರಿನೆಟ್ ನುಡಿಸಿದರು. ಗುರುಬಸುಗೌಡ ಪಾಟೀಲ, ಪರಮೇಶ್ವರ ತೇಲಿ, ಶಿವಾನಂದ ಬಾಡನವರ, ರಾಮಚಂದ್ರ ಹೂಗಾರ ಸಂಗೀತ ಸೇವೆ ಸಲ್ಲಿಸಿದರು. ಮುತ್ತು ಗೆದ್ದೆಪ್ಪನವರ ಸ್ವಾಗತಿಸಿ, ನಿರೂಪಿಸಿದರು.
11 ದಿನ ಮೌನಾನುಷ್ಠಾನ: ಶ್ರೀ ಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ತಮ್ಮ ವೈಯಕ್ತಿಕ ಸಾಧನೆಗಾಗಿ ಕೈಗೊಂಡಿದ್ದ 11 ದಿನಗಳ ಮೌನಾನುಷ್ಠಾನ ಅಂತ್ಯಗೊಳಿಸಿದರು. ಮೌನಾನುಷ್ಠಾನದಿಂದ ಮನಃಶಾಂತಿ ಲಭಿಸುತ್ತದೆ. ಭಕ್ತಾದಿಗಳಲ್ಲಿ ಭಕ್ತಿಭಾವ ತುಂಬುತ್ತದೆ ಎಂದು ಹರ್ಷಾನಂದ ಮಹಾಸ್ವಾಮಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.