* ಗ್ರಾಮದಲ್ಲಿ ಕೃಷಿಯೇ ಪ್ರಧಾನ
*ಬಸವಣ್ಣನ ಸಂಚಾರಕ್ಕೆ 18 ಲಕ್ಷ ರೂ. ಮೊತ್ತದ ಬಸ್ ವ್ಯವಸ್ಥೆ
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಜಿಲ್ಲೆಯ ಪ್ರಮುಖ ಗ್ರಾಮವಾಗಿ ಗುರುತಿಸಿಕೊಂಡು ಬಸವೇಶ್ವರ ದೇವಾಲಯದ ಬಸವನಿಂದ ಧಾರ್ಮಿಕ ಕ್ಷೇತ್ರವಾಗಿ ರಾಜ್ಯದೆಲ್ಲೆಡೆ ಹೆಸರನ್ನು ಪಸರಿಸಿಕೊಂಡಿರುವ, ಹಚ್ಚ ಹಸಿರಿನ ಹೊದಿಕೆ ಹಾಗೂ ಹೆಬ್ಬಂಡೆಗಳ ಮಧ್ಯೆ ಸ್ವಚ್ಛ ಸುಂದರವಾಗಿರುವ ಗ್ರಾಮವೇ ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಕವಣಾಪುರ.
ಶೈಕ್ಷಣಿಕ, ಧಾರ್ಮಿಕ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಈ ಗ್ರಾಮದಲ್ಲಿ ಕೃಷಿಯೇ ಪ್ರ‘ಧಾನ. ಜಿಲ್ಲಾ ಕೇಂದ್ರದಿಂದ 12 ಕಿಮೀ ಅಂತರದಲ್ಲಿರುವ ಕವಣಾಪುರದಲ್ಲಿ ಸುಮಾರು 3000 ಜನಸಂಖ್ಯೆ ಇದೆ. ಚನ್ನಪಟ್ಟಣ- ರಾಮನಗರದಿಂದ ಉತ್ತಮ ರಸ್ತೆ ಸಂಪರ್ಕ ಹೊಂದಿದೆ. ಪ್ರಾಥಮಿಕ ಶಾಲೆ, ಹಾಲಿನ ಡೇರಿ ಇದೆ. ಮೊದ ಮೊದಲು ಗರಿ ಶೆಡ್, ನಾಡು ಹೆಂಚಿನ ಮನೆಗಳು ಮಣ್ಣಿನ ಬೀದಿ ರಸ್ತೆಗಳಿದ್ದ ಗ್ರಾಮ, ಅಭಿವೃದ್ಧಿಯತ್ತ ದಾಪುಗಾಲನ್ನಿಟ್ಟಿದೆ. ಇಂದು ಕಾಂಕ್ರೀಟ್ ಮಹಡಿ ಮನೆಗಳು, ಡಾಂಬರು ರಸ್ತೆಗಳು ಎದ್ದು ಕಾಣುತ್ತಿವೆ.
ಬಸವೇಶ್ವರ, ಪಟ್ಟಲದಮ್ಮ, ಶಿವನಂದೀಶ್ವರ, ಆಂಜನೇಯ ದೇವಾಲಯಗಳಿದ್ದು ಪ್ರತಿ ವರ್ಷ ಹಬ್ಬ ಹರಿದಿನ ಹಾಗೂ ವಿಶೇಷ ದಿನಗಳಲ್ಲಿ ಗ್ರಾಮ ದೇವತೆಗಳ ಪೂಜೆ ಅದ್ದೂರಿಯಾಗಿರುತ್ತದೆ. ಬಸವೇಶ್ವರ, ಪಟ್ಟಲದಮ್ಮ ದೇವಿ ಅಗ್ನಿಕೊಂಡೋತ್ಸವ ಈ ‘ಭಾಗದಲ್ಲಿ ಹೆಸರುವಾಸಿಯಾಗಿದೆ.
ಗ್ರಾಮದಲ್ಲಿ ತೆಂಗು, ಮಾವು, ರೇಷ್ಮೆ ಬೆಳೆ ಯಥೇಚ್ಛವಾಗಿದೆ. ಬಹಳ ವರ್ಷಗಳಿಂದಲೂ ಹೈನುಗಾರಿಕೆ, ಮಾವು ಬೆಳೆಯಲ್ಲಿ ಜೀವನ ಕಟ್ಟಿಕೊಂಡು ಬದುಕು ನಡೆಸುತ್ತಿರುವ ಕುಟುಂಬಗಳಿಗೆ ಗ್ರಾಮದ ಸಮೀಪದ ಮಂಟಪದಕೆರೆ ನೀರಿನ ಕೊರತೆ ನೀಗಿಸಿದೆಯಲ್ಲದೆ, ಅಂತರ್ಜಲಕ್ಕೂ ಪೂರಕವಾಗಿವೆ.
ರೇವಣಸಿದ್ದೇಶ್ವರಬೆಟ್ಟ ಚನ್ನಪಟ್ಟಣ ರಸ್ತೆಯಲ್ಲಿರುವ ಗ್ರಾಮದ ಮಂಟಪದಕೆರೆ ಹೆಬ್ಬಂಡೆ ಕೆಳಗೆ ಸುಂದರ ಪ್ರಕೃತಿ ಸಿರಿಯ ನಡುವೆ ಇದೆ. ಕೆರೆ ದಡದಲ್ಲಿ ಕಲ್ಲಿನ ಹಳೇ ಮಂಟಪವಿದೆ. ಈ ಮಂಟಪ ಮತ್ತು ಕೆರೆ ಸ್ಥಳವನ್ನು ಹಲವು ಸಿನಿಮಾ ತಂಡವು ಚಿತ್ರೀಕರಿಸಿದ್ದು, ಶಿವರಾಜ್‌ಕುಮಾರ್ ಅಭಿನಯದ ನಂಜುಂಡಿ, ಭಾಗ್ಯದ ಬಳೆಗಾರ, ಸುದೀಪ್ ಅವರ ಮಾಣಿಕ್ಯ, ಕುಲದಲ್ಲಿ ಕೀಳ್ಯಾವುದೋ ಸಿನಿಮಾ ಸೇರಿ ಹತ್ತಾರು ‘ಧಾರವಾಹಿಗಳ ಚಿತ್ರೀಕರಣ ಈ ಸ್ಥಳದಲ್ಲೇ ನಡೆದಿದೆ.
ಕವಣಾಪುರ ಗ್ರಾಮವನ್ನು ಹಿಂದೆ ಕೋಣನಪುರ ಎಂದು ಕರೆಯುತ್ತಿದ್ದರಂತೆ. ಏಕೆಂದರೆ, ಕೋಣನ ಗಾಡಿಯೊಂದಿಗೆ ಮೂರ್ನಾಲ್ಕು ಕುಟುಂಬಗಳು ಎಲ್ಲಿಂದಲೋ ಬಂದು ಇಲ್ಲಿ ನೆಲೆನಿಂತರಂತೆ. ನಂತರದ ದಿನಗಳಲ್ಲಿ ಆಡು ಭಾಷೆಯಲ್ಲಿ ಈಗ ಕವಣಾಪುರ ಎಂದಾಗಿದೆ ಎನ್ನುವರು ಗ್ರಾಮದ ಹಿರಿಯರು.
ಗ್ರಾಮದಲ್ಲಿ ಸುಮಾರು 700 ವರ್ಷಗಳ ಇತಿಹಾಸವುಳ್ಳ ಬಸವೇಶ್ವರ ದೇವಸ್ಥಾನವಿದೆ. ಆ ದೇವಾಲಯವನ್ನು 2004ರಲ್ಲಿ ಮರು ನಿರ್ಮಾಣ ಮಾಡಲಾಗಿದೆ. ದೇವಾಲಯಕ್ಕೆ 2018ರಲ್ಲಿ ಬಸವನ ಬಿಡಲಾಯಿತು. ಈ ಬಸವ ಪವಾಡ ಸೃಷ್ಟಿಸುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಗ್ರಾಮದ ಹೆಸರು ನಾಡಿನೆಲ್ಲೆಡೆ ಪ್ರಚಲಿತಗೊಂಡಿದೆ. ಕವಣಾಪುರ ಬಸವನೆಂದೇ ಪ್ರಖ್ಯಾತಿ ಪಡೆದಿದೆ. ಬಸವನ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಗ್ರಾಮಸ್ಥರು ಮತ್ತು ಬಸವೇಶ್ವರ ದೇವಸ್ಥಾನ ಟ್ರಸ್ಟ್‌ನವರು 18 ಲಕ್ಷ ರೂ. ವೆಚ್ಚದ ಬಸ್ ವ್ಯವಸ್ಥೆ ಕಲ್ಪಿಸಿದ್ದಾರೆ.
ಗ್ರಾಮದ ಸುತ್ತಮುತ್ತಲಿನಲ್ಲಿ ತೆಂಗು, ಮಾವು, ಅಡಕೆ ಸೇರಿದಂತೆ ಹಸಿರು ಪರಿಸರದ ಜತೆಗೆ ಉತ್ತಮ ರಸ್ತೆ ಸಂಪರ್ಕವಿರುವ ಕಾರಣ ಬೆಂಗಳೂರು ಮತ್ತಿತರ ಕಡೆಯವರು ಜಮೀನು ಖರೀದಿಸಿ ಫಾರ್ಮ್ ಹೌಸ್ ನಿರ್ಮಾಣ ಮಾಡಿಕೊಂಡಿದ್ದಾರೆ.
ಗ್ರಾಮದ ಮತ್ತೊಂದೆಡೆ ವಿಸ್ತಾರವಾದ ಜಾಗದಲ್ಲಿ ಕಲ್ಲಿನಲ್ಲಿಯೇ ಹೊಸದಾಗಿ ಶಿವನಂದೀಶ್ವರ ದೇವಾಲಯ ನಿರ್ಮಾಣ ಮಾಡಲಾಗುತ್ತಿದೆ. ಕೃಷಿ ಪ್ರಧಾನವಾಗಿ ಬೆಳೆದುಬಂದ ಗ್ರಾಮವೀಗ ಬಸವನ ಪವಾಡದಿಂದ ಧಾರ್ಮಿಕ ಕೇಂದ್ರವಾಗಿ ಮುನ್ನುಗ್ಗುತ್ತಿದೆ.
ಕವಣಾಪುರ ಗ್ರಾಮ ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸದಾ ಮುಂದಿದೆ. ಗ್ರಾಮದಲ್ಲಿ ಬಸವನ ಪದಾರ್ಪಣೆ ಬಳಿಕ ಗ್ರಾಮ ರಾಜ್ಯದ ಮೂಲೆ ಮೂಲೆಗಳಲ್ಲಿ ಹೆಸರಾಗಿದೆ. ಬಸವನ ದಯೆಯಿಂದ ಸರ್ವ ಜನರೂ ದ್ವೇಷ, ಅಸೂಯೆ ಇಲ್ಲದೆ ಬದುಕು ನಡೆಸುತ್ತಾ ಬರುತ್ತಿದ್ದೇವೆ. ಇಂತಹ ಪ್ರಮುಖ ಗ್ರಾಮದಲ್ಲಿ ಜನಿಸಿರುವ ನಾವೇ ಧನ್ಯರು. ಅರುಣ್ ಕವಣಾಪುರ, ಕನ್ನಡ ಉಪನ್ಯಾಸಕರು.