ಮಂಡ್ಯ: ಬೆಂಗಳೂರು-ಮೈಸೂರು ಮಹಾನಗರದ ನಡುವೆ ಇರುವ ಮಂಡ್ಯ ಜಿಲ್ಲೆ ‘ಪುಟ್ಟ ದ್ವೀಪ’ದಂತಿದ್ದು, ಸಾಹಿತ್ಯ ಹಾಗೂ ಸಾಂಸ್ಕೃತಿಕ, ಭಾಷಿಕವಾಗಿ ತನ್ನದೇ ಆದ ಅಸ್ತಿತ್ವವನ್ನು ಸ್ಥಾಪಿಸಿಕೊಂಡಿದೆ ಎಂದು ಮೈಸೂರು ವಿಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಡಾ.ಎಚ್.ಪಿ.ಗೀತಾ ಹೇಳಿದರು.
ನಗರದ ಕರ್ನಾಟಕ ಸಂಘದ ಮಹಿಳಾ ಘಟಕದ ವತಿಯಿಂದ ಕೆ.ವಿ.ಶಂಕರಗೌಡ ಶತಮಾನೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ‘ಕಾವ್ಯಾನು ಸಂಧಾನ’ ಕವಿತೆಯ ಓದು, ಗಾಯನ, ವ್ಯಾಖ್ಯಾನ, ಸಂವಾದ ಕಾರ್ಯಕ್ರಮದಲ್ಲಿ ಕೆ.ಎಸ್.ನರಸಿಂಹಸ್ವಾಮಿ ಅವರ ‘ಮನೆಯಿಂದ ಮನೆಗೆ’ ಕವಿತೆ ಕುರಿತು ಮಾತನಾಡಿದರು. ಪು.ತಿ.ನರಸಿಂಹಾಚಾರ್, ಬಿ.ಎಂ.ಶ್ರೀಕಂಠಯ್ಯ, ಕೆ.ಎಸ್.ನರಸಿಂಹಸ್ವಾಮಿ, ಡಾ.ರಾಗೌ ಮಂಡ್ಯದ ಅಸ್ಮಿತೆಯಾಗಿದ್ದಾರೆ ಎಂದು ಬಣ್ಣಿಸಿದರು.
1933ರಲ್ಲಿ ಕೆ.ಎಸ್.ನರಸಿಂಹಸ್ವಾಮಿ ಅವರು ಕಾವ್ಯ ರಚನೆಗೆ ತೊಡಗಿದರು. ‘ಕಬ್ಬಿನ ಕೂಗು’ ಎಂಬ ಕವಿತೆ ಪ್ರಬುದ್ಧ ಕರ್ನಾಟಕದಲ್ಲಿ ಪ್ರಕಟವಾಗುತ್ತದೆ. ಟಿ.ಎಸ್.ವೆಂಕಣ್ಣಯ್ಯ, ಕುವೆಂಪು ಮೊದಲಾದವರು ಇಂತಹ ಪ್ರತಿಭೆಗಳಿಗೆ ನೀರೆರೆದು ಪ್ರೋತ್ಸಾಹ ಕೊಡುತ್ತಿದ್ದರು ಎಂದರು.
ಮದುವೆಯಾದ ಆರಂಭದ ವರ್ಷಗಳಲ್ಲಿ ಕೆ.ಎಸ್.ನರಸಿಂಹಸ್ವಾಮಿ ಬರೆದ ಕವಿತೆ ‘ನವಿಲೂರಿನೊಳಗೆಲ್ಲ ನೀನೆ ಬಲು ಚೆಲುವೆ’, 1942ರ ಸಂದರ್ಭದಲ್ಲಿ ಪ್ರಕಟವಾದ ಕವನ ಸಂಕಲನ ‘ಮೈಸೂರು ಮಲ್ಲಿಗೆ’ ಕನ್ನಡ ನಾಡಿನಲ್ಲಿ ಮನೆಮಾತಾಯಿತು. ಸುಮಾರು 24 ಮುದ್ರಣ ಕಂಡಿದ್ದು, ಅಂದಿನಿಂದ ಕೆಎಸ್‌ಎನ್ ಅವರನ್ನು ‘ಪ್ರೇಮಕವಿ, ಪುಷ್ಪಕವಿ’ ಎಂದು ಕರೆಯುತ್ತಾರೆ. ಆದರೆ ಕೆಎಸ್‌ಎನ್ ತಮ್ಮನ್ನು ತಾವು ದಾಂಪತ್ಯ ಕವಿ ಎಂದು ಕರೆದುಕೊಳ್ಳುತ್ತಾರೆ ಎಂದು ತಿಳಿಸಿದರು.
ಕುವೆಂಪು ಅವರನ್ನು ಜೇಮ್ಸ್ ಕಸಿನ್ ಅವರು ಕನ್ನಡಕ್ಕೆ ತಂದರೆ, ಕೆಎಸ್‌ಎನ್ ಅವರನ್ನು ಪಟ್ಟಬಿ ರಾಮಯ್ಯ ಅವರು ಕನ್ನಡಕ್ಕೆ ತರುತ್ತಾರೆ. ತೀನಂಶ್ರೀ ಅವರ ಒಲುಮೆ ಮತ್ತು ಬಿಎಂಶ್ರೀ ಅವರ ಇಂಗ್ಲಿಷ್ ಗೀತೆಗಳು ಕೆಎಸ್‌ಎನ್ ಅವರ ಮೇಲೆ ಪ್ರಭಾವ ಬೀರುತ್ತವೆ. ಕೆಎಸ್‌ಎನ್ ಅವರು ಹೆಣ್ಣಿನ ಬಗ್ಗೆ ಎಲ್ಲಿಯೂ ನೇತಾತ್ಮಕವಾಗಿ ಮಾತನಾಡುವುದೇ ಇಲ್ಲ. ಹೆಣ್ಣು ಅವರಿಗೆ ಆದಿಶಕ್ತಿ, ಮಡದಿಯಾಗಿದ್ದಾಳೆ. ಆದ್ದರಿಂದ ‘ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ’ ಎನ್ನುತ್ತಾರೆ. ಹಾಗೆಯೇ ‘ಮದುವೆಯಾಗಿ ತಿಂಗಳಿಲ್ಲ, ನೋಡಿರಣ್ಣ ಹೇಗಿದೆ, ಕೂಗಿದಾಗಲೆಲ್ಲ ಬರುವಡೆಳೆನ್ನ ಶಾರದೆ, ಇಂದು ಮುಂದು ನೋಡದೆ ಎದುರು ಮಾತನಾಡದೆ’ ಇಂತಹದ್ದೇ ಲಯದಲ್ಲಿ ಸಾಗುವ ಇನ್ನೊಂದು ಕವನ: ಒಬ್ಬಳೇ ಮಗಳೆಂದು, ನೀವೇಕೆ ಕೊರಗುವಿರಿ ಒಬ್ಬಳೇ ಮಡದಿ ಎನಗೆ’ ಹೀಗೆ ಯಾವುದೇ ಅಲಂಕಾರದ ಹಂಗಿಗೆ ಒಳಪಡದೆ ಸಹಜ ಸ್ವಭಾವೋಕ್ತಿಯಲ್ಲಿ ಅದ್ಭುತವಾದ ಪರಿಣಾಮವನ್ನು ಉಂಟು ಮಾಡುವ ರೀತಿ ಕಾವ್ಯವನ್ನು ರಚಿಸಿದ್ದಾರೆ ಎಂದು ಬಣ್ಣಿಸಿದರು.
ಮಹಿಳಾ ಘಟಕದ ಸಂಚಾಲಕರಾದ ನಾಗರೇವಕ್ಕ, ಡಾ.ಎಂ.ಎಸ್.ಅನಿತಾ ಮಂಗಲ, ಡಾ.ಎನ್.ಎಸ್.ದೇವಿಕಾ, ಪ್ರೊ.ಎಸ್.ಬಿ.ಶಂಕರಗೌಡ, ಪ್ರೊ.ಮಾ.ರಾಮಕೃಷ್ಣ, ಪ್ರೊ.ಶ್ರೀಲತಾ, ಡಾ.ಎಸ್.ಸಿ.ಮಂಗಳಾ ಇತರರಿದ್ದರು.