ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕರ್ನಾಟಕ ವಿಶ್ವ ವಿದ್ಯಾಲಯ ಮಟ್ಟದ ಅಂತರ್ ಕಾಲೇಜುಗಳ ಅಥ್ಲೆಟಿಕ್ಸ್ ಕ್ರೀಡಾಕೂಟದದ 2ನೇ ದಿನವಾದ ಭಾನುವಾರ 2 ಕೂಟ ದಾಖಲೆಗಳು ನಿರ್ಮಾಣವಾಗಿವೆ.
1500 ಮೀ. ಓಟದಲ್ಲಿ 26 ವರ್ಷಗಳ ಹಿಂದೆ ದಾಖಲಾಗಿದ್ದ ಹಾಗೂ 200 ಮೀ. ಓಟದಲ್ಲಿ 10 ವರ್ಷಗಳ ಹಿಂದಿನ ದಾಖಲೆಯನ್ನು ಧಾರವಾಡದ ಕ್ರೀಡಾಪಟುಗಳು ಅಳಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ.
1997ರ ಕ್ರೀಡಾಕೂಟದಲ್ಲಿ ಬೆಳಗಾವಿ ಲಿಂಗರಾಜ ಕಾಲೇಜಿನ ಆರ್.ಎಂ. ಕುರಬಗಟ್ಟಿ ಅವರು 4 ನಿಮಿಷದಲ್ಲಿ 1500 ಮೀ. ಓಟ ಕ್ರಮಿಸಿ ದಾಖಲೆ ನಿರ್ಮಿಸಿದ್ದರು. ಆ ದಾಖಲೆಯನ್ನು ಕರ್ನಾಟಕ ಕಲಾ ಕಾಲೇಜಿನ ನಾಗರಾಜ ದಿವಟೆ ಮುರಿಯುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ನಾಗರಾಜ ದಿವಟೆ ಕೇವಲ 3 ನಿಮಿಷ 56.66 ಸೆಕೆಂಡ್‌ಗಳಲ್ಲಿ 1500 ಮೀ. ಓಟ ಪೂರ್ಣಗೊಳಿಸಿ ಹೊಸ ದಾಖಲೆ ಬರೆದಿದ್ದಾರೆ.
ಜೆಎಸ್‌ಎಸ್‌ನ ಎಸ್‌ಎಂಐ ಕಾಲೇಜಿನ ನಯನಾ ಕೋಕರೆ 200 ಮೀ. ಓಟದಲ್ಲಿ ಹೊಸ ದಾಖಲೆ ಬರೆದಿದ್ದಾರೆ. 10 ವರ್ಷಗಳ ಹಿಂದೆ ಏರ್ಪಡಿಸಿದ್ದ ಕೂಟದಲ್ಲಿ ಧಾರವಾಡದ ಕರ್ನಾಟಕ ಕಲಾ ಕಾಲೇಜಿನ ಪ್ರಿಯಾಂಕಾ ಕಲಗಿ 25.46 ಸೆಕೆಂಡ್‌ಗಳಲ್ಲಿ 200 ಮೀ. ಕ್ರಮಿಸಿ ದಾಖಲೆ ನಿರ್ಮಿಸಿದ್ದರು. ಆ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದಿರುವ ನಯನಾ ಕೋಕರೆ, 24.88 ಸೆಕೆಂಡ್‌ಗಳಲ್ಲಿ ಓಟ ಪೂರ್ಣಗೊಳಿಸಿದ್ದಾರೆ.
ಶನಿವಾರವಷ್ಟೇ 100 ಮೀ. ಓಟದಲ್ಲಿ ಹೊಸ ದಾಖಲೆ ನಿರ್ಮಿಸಿದ್ದ ನಯನಾ, ಭಾನುವಾರವೂ ಓಟದಲ್ಲಿ ಮತ್ತೊಂದು ದಾಖಲೆ ಬರೆದಿರುವುದು ಕೂಟದ ವಿಶೇಷವಾಗಿದೆ.