ರೈತರ ನಡುವೆ ಬೆಲೆ ವ್ಯತ್ಯಾಸದಿಂದ ಅಸಮಾಧಾನ
ಕವಿತಾಳ: ಪಾಮನಕಲ್ಲೂರು ರೈತ ಸಂಪರ್ಕ ಕೇಂದ್ರದಲ್ಲಿ ಕಡಲೆ ಬೀಜ ಪಡೆಯಲು ಬಂದಿದ್ದ ರೈತರ ನಡುವೆ ಸೋಮವಾರ ನೂಕು ನುಗ್ಗಲು ಉಂಟಾಯಿತು.
ಸಾಮಾನ್ಯ ವರ್ಗದ ರೈತರು ಮತ್ತು ಎಸ್ಸಿ ಎಸ್ಟಿ ರೈತರ ನಡುವೆ ಬೆಲೆಯ ವ್ಯತ್ಯಾಸದಿಂದಾಗಿ ಗೊಂದಲವಾಯಿತು. ಪ್ರತಿ ಪ್ಯಾಕೇಟ್‌ಗೆ ಎಸ್ಸಿ ಎಸ್ಟಿಗೆ 770 ರೂ.ಮತ್ತು ಸಾಮಾನ್ಯ ವರ್ಗದ ರೈತರಿಗೆ 1,020 ರೂ. ದರ ನಿಗದಿಗೊಳಿಸಲಾಗಿತ್ತು. ಸಾಮಾನ್ಯ ವರ್ಗದ ರೈತರು, ಬೀಜ ಪಡೆಯದ ಎಸ್ಸಿ ಎಸ್ಟಿ ರೈತರ ಪಹಣಿ ಮತ್ತು ಆಧಾರ್ ಕಾರ್ಡ್ ನೀಡಿ ಮೀಸಲಾತಿ ಬೆಲೆಯಲ್ಲಿ ಬೀಜ ಪಡೆಯುವುದು ಕಂಡುಬಂತು.
ಪಾಮನಕಲ್ಲೂರು, ಅಮೀನಗಡ, ವಟಗಲ್ ಗ್ರಾಪಂ ವ್ಯಾಪ್ತಿಯ 40ಕ್ಕೂ ಹೆಚ್ಚು ಗ್ರಾಮಗಳ ರೈತ ಸಂಪರ್ಕ ವ್ಯಾಪ್ತಿಗೆ ಬರುತ್ತವೆ. ಕೆಲ ರೈತರಿಗೆ ಬಿತ್ತನೆ ಬೀಜ ದೊರೆಯದಿರುವುದರಿಂದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಿತ್ತನೆ ಬೀಜಕ್ಕಾಗಿ ಮೇಲಧಿಕಾರಿಗಳಿಗೆ ಬೇಡಿಕೆ ಸಲ್ಲಿಸಲಾಗಿದ್ದು, ಉಳಿದ ರೈತರಿಗೆ ನಂತರದಲ್ಲಿ ನೀಡಲಾಗುವುದು ಎಂದು ವಿತರಣಾ ಕೇಂದ್ರದ ಕೃಷಿ ಅಧಿಕಾರಿ ಶ್ರೀಶೈಲ ಭೋವಿ ಹೇಳಿದರು. ರೈತರಲ್ಲಿ ಭೇದಭಾವ ತೋರದೇ ಸಮಾನದರದಲ್ಲಿ ಬಿತ್ತನೆ ಬೀಜ ವಿತರಣೆ ಮಾಡಬೇಕು ಎಂದು ಚಂದಪ್ಪ ಪೂಜಾರಿ, ಹುಚ್ಚುಸಾಬ್ ಗುಡುಗುಂಟಿ, ಹನುಮಂತ ಪೂಜಾರಿ, ಬಸವರಾಜಪ್ಪಗೌಡ ಒತ್ತಾಯಿಸಿದ್ದಾರೆ.
ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಟೋಕನ್ ನೀಡಿ ಗದ್ದಲವಾಗದಂತೆ ಕಡಲೆ ಬಿತ್ತನೆ ಬೀಜ ವಿತರಣೆ ಮಾಡಬೇಕು. ಮೀಸಲಾತಿ ಗೊಂದಲದಿಂದ ಒಬ್ಬರಿಗೆ ಹೆಚ್ಚಿನ ಬೆಲೆ, ಇನ್ನೊಬ್ಬರಿಗೆ ಕಡಿಮೆ ಬೆಲೆ ನಿಗದಿ ಮಾಡಿದ್ದರಿಂದ ರೈತರಲ್ಲಿ ಅಸಮಧಾನ ಉಂಟಾಗುತ್ತಿದೆ.| ಬಸವರಾಜಪ್ಪಗೌಡ ಹರ‌್ವಾಪುರ ರೈತ ಮುಖಂಡ
ರೈತರ ಬೇಡಿಕೆಯಂತೆ ಬಿತ್ತನೆ ಬೀಜವನ್ನು ಸರಬರಾಜು ಮಾಡಿಲ್ಲ. ಈಗಾಗಲೇ ೆ 300 ಕ್ವಿಂಟಾಲ್ ಮಾರಾಟ ಮಾಡಲಾಗಿದೆ. ಇದಲ್ಲದೆ 400 ಕ್ವಿಂಟಾಲ್‌ಗೆ ಬೇಡಿಕೆ ಸಲ್ಲಿಸಲಾಗಿದೆ. ಬಂದ ನಂತರ ಎಲ್ಲರಿಗೂ ಹಂಚಲಾಗುವುದು. ಸಾಮಾನ್ಯ ಮತ್ತು ಎಸ್ಸಿ, ಎಸ್ಟಿ ರೈತರಿಗೆ ಕೊಡಲಾಗುವ ಬೀಜದ ಬೆಲೆಯನ್ನು ಸರ್ಕಾರವೇ ನಿಗದಿಪಡಿಸಿದೆ.| ಶ್ರೀಶೈಲ ಭೋವಿ ಕೃಷಿ ಅಧಿಕಾರಿಗಳು ಪಾಮನಕಲ್ಲೂರು ರೈತ ಸಂಪರ್ಕ ಕೇಂದ್ರ