ಕವಿತಾಳ: ಸಮೀಪದ ಬೆಂಚಮರಡಿಯಲ್ಲಿ ಉಟಕನೂರು ಶ್ರೀ ಮರಿಬಸವಲಿಂಗ ಸ್ವಾಮಿಗಳ ಜಾತ್ರೆ ಅಂಗವಾಗಿ ಬುಧವಾರ 17 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಿತು.
ದಂಪತಿಗಳಿಗೆ ಆಶೀರ್ವದಿಸಿದ ಉಟಕನೂರು ಮಠದ ಪಿಠಾಧಿಪತಿ ಶ್ರೀ ಮರಿಬಸವರಾಜ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಉಟಕನೂರು ಶ್ರೀಗಳು ಜೀವಂತ ಇರುವಾಗಲೆ ಬೆಂಚಮರಡಿ ಗ್ರಾಮದ ಭಕ್ತರಿಗೆ ದರ್ಶನ ನೀಡಿದ್ದರು. ಇಂದು ಗ್ರಾಮದ ಭಕ್ತರು ಶ್ರೀಗಳ ಜಾತ್ರೆ ಅಂಗವಾಗಿ ಸಾಮೂಹಿಕ ವಿವಾಹಗಳನ್ನು ಆಯೋಜಿಸಿ ಬಡರಿಗೆ ಅನುಕೂಲ ಮಾಡಿದ್ದಾರೆ. ಅಂತೆಯೇ ನೂತನ ವಧು-ವರರು ಆದರ್ಶ ದಂಪತಿಯಾಗಿ ಬಾಳಬೇಕೆಂದು ಹೇಳಿದರು.
ಮಲ್ಲದಗುಡ್ಡದ ಆರೂಢ ಅಯ್ಯಪ್ಪತಾತಾ ಮಾತನಾಡಿ, ಪೂಜ್ಯರ ಸನ್ನಿಧಾನದಲ್ಲಿ ಮದುವೆಗಳು ನಡೆಯುವುದು ಪುಣ್ಯದ ಕೆಲಸವಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ ಮಾತನಾಡಿ, ಬೆಂಚಮರಡಿ ಗ್ರಾಮಸ್ಥರು ಸಾಮೂಹಿಕ ವಿವಾಹ ಆಯೋಜಿಸಿ, ಬಡವರಿಗೆ ಸಾಲ ಮಾಡುವುದನ್ನು ತಪ್ಪಿಸಿದ್ದಾರೆ. ಈ ನಿಟ್ಟಿನಲ್ಲಿ ಆರತಕ್ಷತೆ ನೆಪದಲ್ಲಿ ದುಂದುವೆಚ್ಚ ಮಾಡದೆ ಸರಳವಾಗಿ ಮದುವೆ ಕಾರ್ಯಕ್ರಮ ಮುಗಿಸಬೇಕು ಎಂದರು.
ಜಾತ್ರೋತ್ಸವದ ಅಂಗವಾಗಿ ತಯಾರಿಸಲಾಗಿದ್ದ ಕಡಕ್ ರೊಟ್ಟಿ, ಅನ್ನ, ಮೆಣಸಿಕಾಯಿ ಬಜ್ಜಿ, ಚಟ್ನಿ, ಸಾಂಬಾರ್, ಮಜ್ಜಿಗೆ, ಜಿಲೇಬಿ, ತಿಳಿಸಾರು, ಪುಂಡಿಪಲ್ಲೆಯನ್ನು ಭಕ್ತರು ಸವಿದರು.