ವಟಗಲ್‌ನಲ್ಲಿ ಹೆದ್ದಾರಿ ಕಾಮಗಾರಿ ವೀಕ್ಷಣೆಗೆ ಆಗಮಿಸಿದ್ದ ಅಧಿಕಾರಿಗಳಿಗೆ ಅಮೀನಗಡ ಭಾಗದ ರೈತರು ಮನವಿ ಸಲ್ಲಿಸಿದರು. ವಿಶೇಷ ಭೂಸ್ವಾಧೀನ ಅಧಿಕಾರಿ ಗುರುಸಿದ್ದಪ್ಪ, ಸಿರವಾರ ತಹಸೀಲ್ದಾರ್ ರವಿ ಅಂಗಡಿ, ಭಾರತ್ ಮಾಲ್ ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ಭೀಮರಾವ್, ರೈತರಾದ ಹುಚ್ಚರಡ್ಡಿ ನಾಯಕ, ಹನುಮಂತಪ್ಪ ನಾಯಕ, ಮಂಜುನಾಥ ಅಗಸರ, ಬಸವರಾಜಪ್ಪ ಇತರರಿದ್ದರು. 
ಜಿಲ್ಲೆ

ಭೂಮಿ ಕೊಟ್ಟ ರೈತರಿಗೆ ಹೆಚ್ಚಿನ ಪರಿಹಾರ ನೀಡಿ

ಕವಿತಾಳ: ಭಾರತ್ ಮಾಲಾ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಭೂಮಿ ನೀಡುತ್ತೇವೆ. ಆದರೆ, ಎಲ್ಲ ರೈತರಿಗೆ ಸಮಾನವಾಗಿ ಪರಿಹಾರ ನೀಡಬೇಕೆಂದು ಅಮೀನಗಡ ಭಾಗದ ರೈತರು ಶನಿವಾರ ಸಿರವಾರ-ವಟಗಲ್‌ವರೆಗಿನ ರಸ್ತೆ ಕಾಮಗಾರಿ ವೀಕ್ಷಣೆಗೆ ಆಗಮಿಸಿದ್ದ ಅಧಿಕಾರಿಗಳಿಗೆ ಮನವಿ ಮಾಡಿದರು.

ವಟಗಲ್ ಸೀಮಾಕ್ಕೆ ಮೂರರಿಂದ ಐದು ಲಕ್ಷ ರೂ, ಅಮೀನಗಡ ಸಿಮಾಕ್ಕೆ 2.80 ಲಕ್ಷ ರೂ., ಆನಂದಗಲ್‌ಗೆ 5 ರಿಂದ 8 ಲಕ್ಷ ರೂ., ಕವಿತಾಳದ ಕೆಲವೆಡೆ 5 ಲಕ್ಷ ರೂ, ಇನ್ನೂ ಕೆಲವರಿಗೆ 30 ಲಕ್ಷ ರೂ. ಮತ್ತು ಇತ್ತೀಚೆಗೆ ಹೊಸದಾಗಿ ರೈತರಿಗೆ 25 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ನಮಗೇಕೆ ಕೇವಲ ಮೂರು ಲಕ್ಷ ರೂ. ನೀಡಿದ್ದೀರಿ. ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡಬಾರದು. ನಮಗೂ ಹೆಚ್ಚಿನ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಸಿರವಾರ ತಹಸೀಲ್ದಾರ್ ರವಿ ಅಂಗಡಿ ಮಾತನಾಡಿ, ಹೆದ್ದಾರಿ ಕಾಮಗಾರಿ ಯಾರೂ ತಡೆಯುವಂತಿಲ್ಲ. ಹೆಚ್ಚಿನ ಪರಿಹಾರ ಬೇಕೆಂದರೆ ಕೊರ್ಟ್‌ಗೆ ಹೋಗಬಹುದು ಎಂದರು. ವಿಶೇಷ ಭೂಸ್ವಾಧೀನ ಅಧಿಕಾರಿ ಗುರುಸಿದ್ದಪ್ಪ ಮಾತನಾಡಿ, ಎಲ್ಲ ರೈತರು ರಾಯಚೂರಿಗೆ ಬಂದರೆ ಡಿಸಿ ಅವರನ್ನು ಭೇಟಿಯಾಗಿ ಪರಿಹಾರ ಕಂಡುಕೊಳ್ಳೋಣ ಎಂದರು.

ಅದಕ್ಕೆ ರೈತರು, ನಾವು ಅಲ್ಲಿಗೆ ಬರಲ್ಲ. ಜಿಲ್ಲಾಧಿಕಾರಿಗಳು ಇಲ್ಲಿಗೆ ಬಂದು ನಮ್ಮ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು. ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಾದ ಭೀಮರಾವ್, ಅಶೋಕ, ಸುನೀಲ್, ರೈತರಾದ ಹುಚ್ಚರಡ್ಡಿ ನಾಯಕ, ಹನುಮಂತಪ್ಪ ನಾಯಕ, ಮಂಜುನಾಥ ಅಗಸರ, ಬಸವರಾಜಪ್ಪ, ಅಮರೇಗೌಡ ಆನಂದಗಲ್, ವೀರನಗೌಡ ಇತರರಿದ್ದರು.